ಬೈಂದೂರು ಮದ್ದೋಡಿ ಸರ್ಕಾರಿ ಶಾಲೆಯಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ
Wednesday, September 02, 2026
ಸಮೃದ್ಧ ಬೈಂದೂರು ಪರಿಕಲ್ಪನೆಯಡಿ ಕೈಗೊಳ್ಳಲಾಗುತ್ತಿರುವ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಭಾಗವಾಗಿ ಬೈಂದೂರಿನ ಮದ್ದೋಡಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕ ಗುರುರಾಜ್ ಗಂಟಿಹೊಳೆ ಅವರು ಚಾಲನೆ ನೀಡಿದರು.
300 ಟ್ರೀಸ್ ಯೋಜನೆಯಡಿ, ಭೂಮಿ ಟ್ರಸ್ಟ್ ಸಹಕಾರದೊಂದಿಗೆ ಹಾಗೂ ಭೀಮ ಗೋಲ್ಡ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಸಿಎಸ್ಆರ್ ನಿಧಿಯ ನೆರವಿನಿಂದ ಶಾಲೆಯಲ್ಲಿ ವಿವಿಧ ಮೂಲಸೌಕರ್ಯ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ.
ಶಾಲೆಯಲ್ಲಿ ಸುಮಾರು 6 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಬಾಲಕಿಯರ ಶೌಚಾಲಯದ ಕಾಮಗಾರಿಗೆ ಶಾಸಕ ಗುರುರಾಜ್ ಗಂಟಿಹೊಳೆ ಅವರು ಭೂಮಿಪೂಜೆ ನೆರವೇರಿಸಿದರು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳ ಆರೋಗ್ಯ ಮತ್ತು ಶೈಕ್ಷಣಿಕ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಸ್ಥಾಪಿಸಲಾದ ಶುದ್ಧ ಕುಡಿಯುವ ನೀರಿನ ಘಟಕ ಹಾಗೂ ಕಂಪ್ಯೂಟರ್ ಲ್ಯಾಬ್ ಅನ್ನು ಉದ್ಘಾಟಿಸಿದರು.
ಶಾಲಾ ಮಕ್ಕಳಿಗೆ ಉತ್ತಮ ಹಾಗೂ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸುವ ಮೂಲಕ ಅವರ ಶೈಕ್ಷಣಿಕ ಪ್ರಗತಿಗೆ ಪೂರಕ ವಾತಾವರಣ ನಿರ್ಮಿಸುವುದು ಈ ಯೋಜನೆಗಳ ಉದ್ದೇಶವಾಗಿದೆ. ಶುದ್ಧ ಕುಡಿಯುವ ನೀರು, ಉತ್ತಮ ನೈರ್ಮಲ್ಯ ವ್ಯವಸ್ಥೆ ಹಾಗೂ ತಂತ್ರಜ್ಞಾನ ಆಧಾರಿತ ಶಿಕ್ಷಣದ ಸೌಲಭ್ಯಗಳು ವಿದ್ಯಾರ್ಥಿಗಳ ಆರೋಗ್ಯ ಮತ್ತು ಶಿಕ್ಷಣದ ಗುಣಮಟ್ಟವನ್ನು ಸುಧಾರಿಸಲು ಸಹಕಾರಿಯಾಗಲಿವೆ.
ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳ ಮೂಲಸೌಕರ್ಯ ಅಭಿವೃದ್ಧಿಗೆ ಇಂತಹ ಯೋಜನೆಗಳು ಮಹತ್ವದ ಕೊಡುಗೆ ನೀಡಲಿದ್ದು, ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕೆ ಪೂರಕವಾಗಲಿವೆ ಎಂದು ಕಾರ್ಯಕ್ರಮದಲ್ಲಿ ತಿಳಿಸಲಾಯಿತು.

