-->
 ಮಣಿಪಾಲ: ಪಶ್ಚಿಮ ವಲಯ 8ನೇ ಪೊಲೀಸ್‌ ಕರ್ತವ್ಯ ಕೂಟ: ಉಡುಪಿ ಜಿಲ್ಲೆಗೆ ಸರ್ವಾಂಗೀಣ ತಂಡ ಪ್ರಶಸ್ತಿ

ಮಣಿಪಾಲ: ಪಶ್ಚಿಮ ವಲಯ 8ನೇ ಪೊಲೀಸ್‌ ಕರ್ತವ್ಯ ಕೂಟ: ಉಡುಪಿ ಜಿಲ್ಲೆಗೆ ಸರ್ವಾಂಗೀಣ ತಂಡ ಪ್ರಶಸ್ತಿ


ಪಶ್ಚಿಮ ವಲಯದ 8ನೇ ಪೊಲೀಸ್‌ ಕರ್ತವ್ಯ ಕೂಟದ ಸಮಾರೋಪ ಸಮಾರಂಭ ಸೆ.1ರಂದು ಮಣಿಪಾಲ ಮಾಹೆಯ ಡಾ. ಟಿ.ಎಂ.ಎ. ಪೈ ಸಭಾಂಗಣದಲ್ಲಿ ನಡೆಯಿತು.


ಪಶ್ಚಿಮ ವಲಯದ ಪೊಲೀಸ್‌ ಉಪಮಹಾನಿರೀಕ್ಷಕ ಚೇತನ್‌ ಆರ್. ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹರಿರಾಮ್‌ ಶಂಕರ್‌, ಮಾಹೆಯ ಪ್ರೊ-ಚಾನ್ಸಲರ್‌ ಡಾ. ಎಚ್.ಎಸ್. ಬಲ್ಲಾಳ್‌, ಮಂಗಳೂರು ವಲಯದ ಹಿರಿಯ ಕಾನೂನು ಅಧಿಕಾರಿ ಶಿವಪ್ರಸಾದ್‌ ಆಳ್ವ ಕೆ., ಪ್ರಾದೇಶಿಕ ವಿಧಿ ವಿಜ್ಞಾನ ಪ್ರಯೋಗಾಲಯದ ಉಪನಿರ್ದೇಶಕಿ ಸುಜಾತ ಕೆ.ಎಂ., ಮಾಹೆಯ ಡಾ. ಅನಿಲ್‌ ಭಟ್‌, ಡಾ. ವಿನೋದ್‌ ಸಿ. ನಾಯಕ್‌ ಸೇರಿದಂತೆ ಪೊಲೀಸ್‌ ಅಧಿಕಾರಿಗಳು ಉಪಸ್ಥಿತರಿದ್ದರು.


ಆಗಸ್ಟ್‌ 31ರಂದು ಆರಂಭಗೊಂಡಿದ್ದ ಪೊಲೀಸ್‌ ಕರ್ತವ್ಯ ಕೂಟದಲ್ಲಿ ವೈಜ್ಞಾನಿಕ ತನಿಖೆಗೆ ಸಂಬಂಧಿಸಿದ 8 ವಿಭಾಗಗಳು, ಗಣಕಯಂತ್ರ ನೈಪುಣ್ಯತೆಯ 3 ವಿಭಾಗಗಳು, ಛಾಯಾಗ್ರಹಣ, ವಿಡಿಯೋಗ್ರಫಿ, ವಿದ್ವಂಸಕ ಕೃತ್ಯ ತಪಾಸಣೆಯ 4 ವಿಭಾಗಗಳು ಹಾಗೂ ಪೊಲೀಸ್‌ ಶ್ವಾನದಳದ 3 ವಿಭಾಗಗಳು ಸೇರಿದಂತೆ ಒಟ್ಟು 20 ವಿಭಾಗಗಳಲ್ಲಿ ಸ್ಪರ್ಧೆಗಳು ನಡೆದವು.

ಮಂಗಳೂರು ನಗರ, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಹಾಗೂ ಚಿಕ್ಕಮಗಳೂರು ಜಿಲ್ಲೆಗಳ ನುರಿತ ಪೊಲೀಸ್‌ ಅಧಿಕಾರಿಗಳು ಮತ್ತು ಸಿಬ್ಬಂದಿ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು. ಅತ್ಯಧಿಕ ಪದಕಗಳನ್ನು ಗಳಿಸಿದ ಉಡುಪಿ ಜಿಲ್ಲೆ ಸರ್ವಾಂಗೀಣ ತಂಡ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.

ಉಡುಪಿಯ ಪೊಲೀಸ್‌ ಶ್ವಾನ ‘ಸ್ನೈಪರ್‌’ ಅತ್ಯುತ್ತಮ ಶ್ವಾನ ಪ್ರಶಸ್ತಿಗೆ ಭಾಜನವಾಗಿದ್ದು, ಅದರ ಹ್ಯಾಂಡ್ಲರ್‌ ಹರೀಶ್‌ ಶೆಟ್ಟಿ ಪ್ರಶಸ್ತಿ ಸ್ವೀಕರಿಸಿದರು.

ಸಮಾರಂಭದಲ್ಲಿ ಮಾತನಾಡಿದ ಪೊಲೀಸ್‌ ಉಪಮಹಾನಿರೀಕ್ಷಕ ಚೇತನ್‌ ಆರ್., ವಿಜೇತರಿಗೆ ಅಭಿನಂದನೆ ಸಲ್ಲಿಸಿ, ರಾಜ್ಯ ಹಾಗೂ ರಾಷ್ಟ್ರಮಟ್ಟದ ಸ್ಪರ್ಧೆಗಳಲ್ಲಿ ಹೆಚ್ಚಿನ ಪದಕಗಳನ್ನು ಗಳಿಸುವಂತೆ ಶುಭ ಹಾರೈಸಿದರು. ಇಂದಿನ ಸಮಾಜದಲ್ಲಿ ಪೊಲೀಸರು ವೈಜ್ಞಾನಿಕ ವಿಧಾನಗಳನ್ನು ಅಳವಡಿಸಿಕೊಂಡು ತನಿಖೆ ನಡೆಸಬೇಕು. ಅಪರಾಧಿಗಳಿಗೆ ಶಿಕ್ಷೆಯಾಗುವ ಪ್ರಮಾಣ ಹೆಚ್ಚಿಸುವ ಮೂಲಕ ನೊಂದವರಿಗೆ ನ್ಯಾಯ ದೊರಕಿಸಿಕೊಡಲು ಪೊಲೀಸರು ಶ್ರಮಿಸಬೇಕು ಎಂದು ಕರೆ ನೀಡಿದರು.

ವಿಶೇಷ ಆಹ್ವಾನಿತರು ವಿಜೇತರಿಗೆ ಅಭಿನಂದನೆ ಸಲ್ಲಿಸಿ, ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡುವಂತೆ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಕಳೆದ ವರ್ಷ ರಾಷ್ಟ್ರಮಟ್ಟದ ಪೊಲೀಸ್‌ ಕರ್ತವ್ಯ ಸ್ಪರ್ಧೆಯಲ್ಲಿ ಪದಕ ಗಳಿಸಿದ್ದ ಉಡುಪಿ ಡಿ.ಎ.ಆರ್.‌ನ ಪೊಲೀಸ್‌ ಸಿಬ್ಬಂದಿ ಲೋಕೇಶ್‌ ಅವರನ್ನು ಸನ್ಮಾನಿಸಲಾಯಿತು. ಪೊಲೀಸ್‌ ಕರ್ತವ್ಯ ಕೂಟದ ಅಚ್ಚುಕಟ್ಟು ನಿರ್ವಹಣೆಗಾಗಿ ನೋಡಲ್‌ ಅಧಿಕಾರಿ ಗೌರೀಶ್‌ ಎ.ಸಿ. ಅವರನ್ನು ಜಿಲ್ಲಾ ಪೊಲೀಸ್‌ ವತಿಯಿಂದ ಸನ್ಮಾನಿಸಲಾಯಿತು.

ಪೊಲೀಸ್‌ ನಿರೀಕ್ಷಕ ಸೋಮಶಂಕರ್‌ ಎನ್. ಸ್ವಾಗತಿಸಿದರು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹರಿರಾಮ್‌ ಶಂಕರ್‌ ವಂದಿಸಿದರು. ಪೊಲೀಸ್‌ ಸಿಬ್ಬಂದಿ ಶಿವಾನಂದ ಕಾರ್ಯಕ್ರಮ ನಿರೂಪಿಸಿದರು.  

Ads on article

Advertise in articles 1

advertising articles 2

Advertise under the article