-->
 ಉಡುಪಿ: ಸಾಮಾಜಿಕ ಕಾರ್ಯಕರ್ತ, ನಾಟಕ ಕಲಾವಿದ ಶೇಖರ್ ಅಮೀನ್ ನಿಧನ

ಉಡುಪಿ: ಸಾಮಾಜಿಕ ಕಾರ್ಯಕರ್ತ, ನಾಟಕ ಕಲಾವಿದ ಶೇಖರ್ ಅಮೀನ್ ನಿಧನ


ಉಡುಪಿಯ ಶಿರಿಬೀಡು ಮಠದಬೆಟ್ಟು ಪರಿಸರದ ನಿವಾಸಿ, ಹಿರಿಯ ಸಾಮಾಜಿಕ ಕಾರ್ಯಕರ್ತ ಹಾಗೂ ನಾಟಕ ಕಲಾವಿದ ಶೇಖರ್ ಜಿ. ಅಮೀನ್ (75) ಅವರು ಅಲ್ಪಕಾಲದ ಅಸೌಖ್ಯದಿಂದ ಬುಧವಾರ ಬೆಳಗ್ಗೆ ತಮ್ಮ ಸ್ವಗೃಹದಲ್ಲಿ ನಿಧನರಾದರು.

ಮೃತರು ಪತ್ನಿ, ಕುಟುಂಬಸ್ಥರು ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಸಾಮಾಜಿಕ ಮತ್ತು ಧಾರ್ಮಿಕ ಕ್ಷೇತ್ರಗಳಲ್ಲಿ ಸಕ್ರಿಯರಾಗಿದ್ದ ಶೇಖರ್ ಜಿ. ಅಮೀನ್ ಅವರು ಉಡುಪಿ ಸರ್ವಿಸ್ ಬಸ್ ನಿಲ್ದಾಣ ಸಮೀಪದ ನೆಲ್ಲಿಕಟ್ಟೆಯ ಕಂಬಿಗಾರ ಬಬ್ಬುಸ್ವಾಮಿ ದೈವಸ್ಥಾನದ ಜೀರ್ಣೋದ್ಧಾರ ಕಾರ್ಯದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ದೈವಸ್ಥಾನದ ಸಮಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಅವರು, ಶಿರಿಬೀಡು-ಬನ್ನಂಜೆ ನಾಗಬ್ರಹ್ಮ ಸ್ಥಾನದಲ್ಲಿ ಕಾರ್ಯದರ್ಶಿಯಾಗಿಯೂ ಕಾರ್ಯನಿರ್ವಹಿಸಿದ್ದರು.

ಉಡುಪಿ ಶಿರಿಬೀಡಿನ ಸರಸ್ವತಿ ಹಿರಿಯ ಪ್ರಾಥಮಿಕ ಶಾಲೆಯ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿ, ಶೈಕ್ಷಣಿಕ ಹಾಗೂ ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.

ಉತ್ತಮ ನಾಟಕ ಕಲಾವಿದರಾಗಿದ್ದ ಶೇಖರ್ ಜಿ. ಅಮೀನ್ ಅವರು 'ಬಯ್ಯ ಮಲ್ಲಿಗೆ' ನಾಟಕದಲ್ಲಿ ಹೀರೋ ಶಶಾಂಕ್ ಪಾತ್ರದಲ್ಲಿ ಅಭಿನಯಿಸಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾಗಿದ್ದರು.

ಅವರ ನಿಧನಕ್ಕೆ ಕಾಂಗ್ರೆಸ್ ಮುಖಂಡ ಜಯ ಶೆಟ್ಟಿ ಬನ್ನಂಜೆ, ಸರಸ್ವತಿ ಹಿರಿಯ ಪ್ರಾಥಮಿಕ ಶಾಲೆಯ ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಸುರೇಶ್ ಶೆಟ್ಟಿ ಬನ್ನಂಜೆ, ಕೋಶಾಧಿಕಾರಿ ಗಣೇಶ್ ರಾಜ್ ಸರಳೆಬೆಟ್ಟು, ಸುಭಾಷ್ ಪೂಜಾರಿ ಹಾಗೂ ಶಾಲಾ-ಕಲಾ ಕಾರ್ಯದರ್ಶಿ ಮುರಳಿಧರ ದೇವಾಡಿಗ ಶಿರಿಬೀಡು ಸೇರಿದಂತೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.


Ads on article

Advertise in articles 1

advertising articles 2

Advertise under the article