-->
 ಉಡುಪಿ ರೈಲ್ವೇ ನಿಲ್ದಾಣ ಬಳಿ ಅಸಹಾಯಕ ಸ್ಥಿತಿಯಲ್ಲಿದ್ದ ಮಹಿಳೆಯ ರಕ್ಷಣೆ

ಉಡುಪಿ ರೈಲ್ವೇ ನಿಲ್ದಾಣ ಬಳಿ ಅಸಹಾಯಕ ಸ್ಥಿತಿಯಲ್ಲಿದ್ದ ಮಹಿಳೆಯ ರಕ್ಷಣೆ


ಉಡುಪಿ ರೈಲ್ವೆ ನಿಲ್ದಾಣದ ಬಳಿ ಅಸಹಾಯಕ ಸ್ಥಿತಿಯಲ್ಲಿದ್ದ ಮಹಾರಾಷ್ಟ್ರ ಮೂಲದ ಹಿರಿಯ ನಾಗರಿಕ ಮಹಿಳೆಯೊಬ್ಬರನ್ನು ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರದ ಸಿಬ್ಬಂದಿ ಹಾಗೂ ಜಿಲ್ಲಾ ನಾಗರಿಕ ಸಮಿತಿಯ ಅಧ್ಯಕ್ಷ ನಿತ್ಯಾನಂದ ಒಳಕಾಡು ಅವರ ನೇತೃತ್ವದಲ್ಲಿ ಸುರಕ್ಷಿತವಾಗಿ ರಕ್ಷಿಸಿ ವೃದ್ಧಾಶ್ರಮಕ್ಕೆ ದಾಖಲಿಸಲಾಗಿದೆ.

ರಕ್ಷಿಸಲ್ಪಟ್ಟ ಹಿರಿಯ ನಾಗರಿಕರನ್ನು ಸಂಗೀತ ರಾಜಾರಾಮ್ ಪಾಟೀಲ್ ಎಂದು ಗುರುತಿಸಲಾಗಿದ್ದು, ಅವರು ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯವರು ಎಂದು ತಿಳಿದುಬಂದಿದೆ.

ಉಡುಪಿ ರೈಲ್ವೆ ನಿಲ್ದಾಣದ ಬಳಿ ಹಿರಿಯ ನಾಗರಿಕರೊಬ್ಬರು ಅಸಹಾಯಕ ಪರಿಸ್ಥಿತಿಯಲ್ಲಿ ಇರುವ ಬಗ್ಗೆ ಮಾಹಿತಿ ದೊರೆತ ಹಿನ್ನೆಲೆಯಲ್ಲಿ, ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರದ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ವಿಚಾರಣೆ ನಡೆಸಿದರು. ಈ ವೇಳೆ ಸಂಗೀತ ರಾಜಾರಾಮ್ ಪಾಟೀಲ್ ಅವರು ತಮ್ಮ ಹೆಸರು ಹಾಗೂ ಮೂಲ ಊರಿನ ಬಗ್ಗೆ ಮಾಹಿತಿ ನೀಡಿದರೂ, ತಮ್ಮ ಕುಟುಂಬ ಸದಸ್ಯರು ಅಥವಾ ಸಂಬಂಧಿಕರ ಕುರಿತು ಯಾವುದೇ ಸಮರ್ಪಕ ಮಾಹಿತಿಯನ್ನು ನೀಡಲು ಸಾಧ್ಯವಾಗಿರಲಿಲ್ಲ.

ಅವರ ಸುರಕ್ಷತೆ, ಆಹಾರ, ಆಶ್ರಯ, ಆರೈಕೆ ಹಾಗೂ ಅಗತ್ಯ ವೈದ್ಯಕೀಯ ನೆರವಿನ ದೃಷ್ಟಿಯಿಂದ ಸೂಕ್ತ ವ್ಯವಸ್ಥೆ ಕಲ್ಪಿಸುವ ಅಗತ್ಯವಿದ್ದ ಹಿನ್ನೆಲೆಯಲ್ಲಿ ತಕ್ಷಣ ಕ್ರಮ ಕೈಗೊಳ್ಳಲಾಯಿತು.

ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ರತ್ನಾ ಅವರ ಮಾರ್ಗದರ್ಶನದಲ್ಲಿ, ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರದ ಯೋಜನಾ ಸಂಯೋಜಕ ರೋಶನ್ ಕೆ., ಆಪ್ತ ಸಮಾಲೋಚಕಿ ನಯನಾ, ಜಿಲ್ಲಾ ನಾಗರಿಕ ಸಮಿತಿಯ ಅಧ್ಯಕ್ಷ ನಿತ್ಯಾನಂದ ಒಳಕಾಡು ಅವರ ನೇತೃತ್ವ ಹಾಗೂ ಸಹಕಾರದೊಂದಿಗೆ ಮಣಿಪಾಲ ಪೊಲೀಸ್ ಠಾಣೆಯ ವಿದ್ಯಾ ಮತ್ತು ರೈಲ್ವೆ ಇಲಾಖೆ ಸಿಬ್ಬಂದಿಯ ಸಹಯೋಗದಲ್ಲಿ ಹಿರಿಯ ನಾಗರಿಕ ಮಹಿಳೆಯನ್ನು ಸುರಕ್ಷಿತವಾಗಿ ರಕ್ಷಿಸಲಾಯಿತು.

ಬಳಿಕ ಅವರ ಮುಂದಿನ ಆರೈಕೆ ಮತ್ತು ಸುರಕ್ಷತೆಯ ಹಿತದೃಷ್ಟಿಯಿಂದ ಶಂಕರಪುರದ ವಿಶ್ವಾಸದ ಮನೆ ವೃದ್ಧಾಶ್ರಮಕ್ಕೆ ದಾಖಲಿಸಲಾಗಿದ್ದು, ಅಗತ್ಯ ಆಶ್ರಯ, ಆಹಾರ, ಆರೈಕೆ ಹಾಗೂ ವೈದ್ಯಕೀಯ ನೆರವು ದೊರೆಯುವಂತೆ ವ್ಯವಸ್ಥೆ ಮಾಡಲಾಗಿದೆ.

ಸಂಗೀತ ರಾಜಾರಾಮ್ ಪಾಟೀಲ್ ಅವರ ಸಂಬಂಧಿಕರು ಅಥವಾ ಪರಿಚಯಸ್ಥರು ಯಾರಾದರೂ ಇದ್ದಲ್ಲಿ, ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರದ ಟೋಲ್‌ಫ್ರೀ ಸಂಖ್ಯೆ 1090 ಅಥವಾ ದೂರವಾಣಿ ಸಂಖ್ಯೆ 0820-2526394 ಅನ್ನು ಸಂಪರ್ಕಿಸುವಂತೆ ಕೋರಲಾಗಿದೆ.

Ads on article

Advertise in articles 1

advertising articles 2

Advertise under the article