ಉಡುಪಿ ಪ್ರಸಾದ್ ನೇತ್ರಾಲಯ ವತಿಯಿಂದ "ನೇತ್ರದಾನ ಅರಿವು ಜಾಥಾ"
Wednesday, September 09, 2026
ಉಡುಪಿ ನೇತ್ರ ಜ್ಯೋತಿ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಐ ಬ್ಯಾಂಕ್, ಉಡುಪಿಯ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ಹಾಗೂ ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ನೇತ್ರದಾನ ಪಾಕ್ಷಿಕ ಆಚರಣೆ–2026ರ ಅಂಗವಾಗಿ ಬುಧವಾರ ಉಡುಪಿಯಲ್ಲಿ ‘ನೇತ್ರದಾನ ಅರಿವು ಜಾಥಾ’ ನಡೆಯಿತು.
ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ಜಾಥಾಕ್ಕೆ ಚಾಲನೆ ನೀಡಿದರು. ಉಡುಪಿಯ ಸರ್ವಿಸ್ ಬಸ್ ನಿಲ್ದಾಣದಿಂದ ಪ್ರಸಾದ್ ನೇತ್ರಾಲಯದವರೆಗೆ ನಡೆದ ಜಾಥಾದಲ್ಲಿ ಕಾಲೇಜು ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿ ನೇತ್ರದಾನದ ಮಹತ್ವದ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಯಶ್ಪಾಲ್ ಸುವರ್ಣ, ನೇತ್ರದಾನದ ಬಗ್ಗೆ ಸಮಾಜದಲ್ಲಿ ಹೆಚ್ಚಿನ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ಆಯೋಜಿಸಿರುವ ಪ್ರಸಾದ್ ನೇತ್ರಾಲಯದ ಸಮಾಜಮುಖಿ ಕಾರ್ಯವನ್ನು ಶ್ಲಾಘಿಸಿದರು.
ನೇತ್ರದಾನ ಪಾಕ್ಷಿಕ ಆಚರಣೆಯ ಅಂಗವಾಗಿ ಕಾಲೇಜು ವಿದ್ಯಾರ್ಥಿಗಳಿಗಾಗಿ ಪ್ರಬಂಧ, ಭಾಷಣ ಹಾಗೂ ಪೋಸ್ಟರ್ ರಚನಾ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಹಾಗೂ ಅಭಿನಂದನಾ ಪತ್ರಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ನೇತ್ರದಾನಕ್ಕೆ ವಾಗ್ದಾನ ಮಾಡಿದ ಹಲವಾರು ದಾನಿಗಳಿಗೆ ನೇತ್ರದಾನ ಪ್ರಮಾಣ ಪತ್ರಗಳನ್ನು ವೇದಿಕೆಯಲ್ಲಿದ್ದ ಗಣ್ಯರು ಹಸ್ತಾಂತರಿಸಿದರು. ಉಡುಪಿಯ ಹಿರಿಯ ನ್ಯಾಯವಾದಿ ಉಮೇಶ್ ಶೆಟ್ಟಿ ಕಳತ್ತೂರು ಅವರು ನೇತ್ರದಾನದ ಪ್ರಮಾಣ ವಚನ ಬೋಧಿಸಿದರು.
ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಎ. ಗಫೂರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಂಧತ್ವ ನಿಯಂತ್ರಣಾಧಿಕಾರಿ ಡಾ. ಲತಾ ನಾಯಕ, ಪ್ರಸಾದ್ ನೇತ್ರಾಲಯದ ಆಡಳಿತ ನಿರ್ದೇಶಕ ಡಾ. ಕೃಷ್ಣ ಪ್ರಸಾದ್, ಆಡಳಿತ ನಿರ್ದೇಶಕಿ ರಶ್ಮಿ ಕೃಷ್ಣ ಪ್ರಸಾದ್ ಹಾಗೂ ಕಾರ್ನಿಯಾ ತಜ್ಞೆ ಡಾ. ಅಪರ್ಣಾ ನಾಯಕ್ ಉಪಸ್ಥಿತರಿದ್ದರು.
ಡಾ. ಬಾಲಕೃಷ್ಣ ಮದ್ದೋಡಿಯವರು ಕಾರ್ಯಕ್ರಮ ನಿರೂಪಿಸಿದರು. ಪ್ರಸಾದ್ ನೇತ್ರಾಲಯದ ಮುಖ್ಯ ಆಡಳಿತ ಅಧಿಕಾರಿ ಮಧ್ವವಲ್ಲಭ ಆಚಾರ್ಯ ಕಾರ್ಯಕ್ರಮ ನಿರ್ವಹಿಸಿದರು.


.jpeg)