ನಕಲಿ ಚಿನ್ನ ಅಡವಿರಿಸಿ ಸಾಲ ಪಡೆದು ವಂಚನೆ
Monday, November 03, 2025
ಉಡುಪಿ ಕೋ ಅಪರೇಟಿವ್ ಟೌನ್ ಬ್ಯಾಂಕ್‌ನ ಪೆರ್ಡೂರು ಶಾಖೆಯಲ್ಲಿ ನಕಲಿ ಚಿನ್ನ ಅಡವಿರಿಸಿ ಸಾಲ ಪಡೆದು ವಂಚಿಸಿರುವ ಬಗ್ಗೆ ಹಿರಿಯಡ್ಕ ಠಾಣೆಯಲ್ಲಿ ದೂರು ದಾಖಲಾಗಿದೆ.
ಬ್ಯಾಂಕ್ ನ ಪೆರ್ಡೂರು ಶಾಖೆಯ ವ್ಯವಸ್ಥಾಪಕ ಸಂದೇಶ್ ಅವರು ನೀಡಿದ ದೂರಿನಂತೆ ಪುನೀತ್ ಎಂಬವರ ವಿರುದ್ಧ ಪ್ರಕರಣ ದಾಖಲಾಗಿದೆ. ಪುನೀತ್ ಅವರು ಎ. 8ರಂದು ಸುಮಾರು 40.1 ಗ್ರಾಂ ತೂಕದ ಎರಡು ಚಿನ್ನದ ಬಳೆಗಳನ್ನು ಅಡವಿಟ್ಟು ಲಕ್ಷದ 80 ಸಾವಿರ ಹಣ ಪಡೆದಿದ್ದರು. ಆ ನಂತರದಲ್ಲಿ ಸಾಲ ಮರುಪಾವತಿಸಿ, ಅದೇ ಚಿನ್ನವನ್ನಿಟ್ಟು ಹೆಚ್ಚುವರಿ ಸಾಲ 2,80,000 ಹಣ ಪಡೆದಿದ್ದರು.
ನಂತರ ಅಕ್ಟೋಬರ್ 8ರಂದು ಚಿನ್ನದ ಚೈನ್‌ನ್ನು ಅಡವಿರಿಸಿ 1,50,000 ಸಾಲ ಪಡೆಯಲು ಬಂದಿದ್ದ. ಚಿನ್ನದ ಚೈನನ್ನು ಪರಿಶೀಲಸಿದಾಗ ನಕಲಿ ಚಿನ್ನವೆಂದು ತಿಳಿದು ಬಂದಿದೆ. ಹಾಗಾಗಿ ಪುನೀತ್ ಈ ಮೊದಲು ಅಡವಿಟ್ಟ ಚಿನ್ನಾಭರಣಗಳನ್ನು ಚಿನ್ನದ ಶುದ್ಧತೆ ಪರಿಶೀಲಿಸುವ ಯಂತ್ರದಲ್ಲಿ ಪರಿಶೀಲಿಸುವಾಗ ಮೊದಲಿಗೆ 22 ಕ್ಯಾರೆಟ್ ಚಿನ್ನವೆಂದು ಬಂದಿದೆ. ಆದರೆ ಆಸಿಡ್ ಹಾಕಿ ತಿಕ್ಕಿ ಬಳಿಕ ಯಂತ್ರದಲ್ಲಿ ಪರಿಶೀಲಿಸಿದಾಗ ಅದು ನಕಲಿ ಚಿನ್ನ ಎಂಬುದಾಗಿ ತಿಳಿದು ಬಂದಿದೆ. ಹೀಗಾಗಿ ಆರೋಪಿ ಪುನೀತ್ ವಿರುದ್ಧ ಹಿರಿಯಡ್ಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.