ಮೋದಿ ಸುಗಮ ವಾಯುಯಾನದ ಭರವಸೆ ನೀಡಿ ‘ಯಾನ ನಿಲುಗಡೆ ಭಾಗ್ಯ’ ನೀಡಿದ್ದಾರೆ: ಸೆಂಥಿಲ್
ಭಾರತದ ಅತಿದೊಡ್ಡ ಖಾಸಗಿ ಏರ್‌ಲೈನ್ ಇಂಡಿಗೋ ಕಂಪನಿಯ ವಿಮಾನ ಸೇವೆಗಳಲ್ಲಿ ಉಂಟಾದ ಅಸ್ತವ್ಯಸ್ತತೆಯನ್ನು ಟೀಕಿಸಿರುವ ಕಾಂಗ್ರೆಸ್ ಪಕ್ಷ ಶನಿವಾರ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ.
ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಕಾಂಗ್ರೆಸ್ ನಾಯಕ ಹಾಗೂ ತಿರುವಳ್ಳುವರ್ ಸಂಸದ ಸಸಿಕಾಂತ್ ಸೆಂಥಿಲ್, “ಪ್ರಧಾನಿ ನರೇಂದ್ರ ಮೋದಿಯವರು ‘Ease of Travel’ ಎಂದಿದ್ದರು, ಆದರೆ ಕೊಟ್ಟಿರುವುದು ‘Cease of Air Travel’ ಆಗಿದೆ,” ಎಂದು ವ್ಯಂಗ್ಯವಾಡಿದರು.
ಇಂಡಿಗೋ ಸಂಸ್ಥೆಯು ಕಳೆದ ಐದು ದಿನಗಳಿಂದ 1,000 ಕ್ಕೂ ಹೆಚ್ಚು ವಿಮಾನಗಳನ್ನು ರದ್ದುಪಡಿಸಿರುವುದರಿಂದ ಸಾವಿರಾರು ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನಾಗರಿಕ ವಿಮಾನ ವ್ಯವಹಾರ ಸಚಿವಾಲಯವು ಸಂಸ್ಥೆಗೆ ಭಾನುವಾರ ಸಂಜೆಗೊಳಗೆ ರದ್ದುಪಡಿಸಿದ ಟಿಕೆಟ್‌ಗಳ ಹಣ ಹಿಂತಿರುಗಿಸಲು ಹಾಗೂ ಕಳೆದುಹೋದ ಲಗೇಜ್‌ಗಳನ್ನು ಎರಡು ದಿನಗಳೊಳಗೆ ತಲುಪಿಸುವಂತೆ ಕಡ್ಡಾಯ ಸೂಚನೆ ನೀಡಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸೆಂಥಿಲ್ ಅವರು, “ಇದು ಸಹಜ ಅಡಚಣೆಯಲ್ಲ. ಇದು ಬಿಜೆಪಿ ಸರ್ಕಾರದ ನೀತಿಗಳ ನೇರ ಪರಿಣಾಮವಾಗಿದೆ. ಉದ್ಯಮದಲ್ಲಿ ಸ್ಪರ್ಧೆಯನ್ನು ಕುಗ್ಗಿಸಿ, ಕೆಲವರ ಆರ್ಥಿಕ ಹಿತಾಸಕ್ತಿಗೆ ಸರ್ಕಾರ ಕೆಲಸ ಮಾಡುತ್ತಿದೆ,” ಎಂದು ಆರೋಪಿಸಿದರು. “ಎಫ್‌ಡಿಟಿಎಲ್ (Flight Duty Time Limitation) ನಿಯಮಗಳನ್ನು 2024 ಜನವರಿಯಲ್ಲಿ ಪ್ರಕಟಿಸಿ 2025ರಿಂದ ಭಾಗಶಃ ಜಾರಿಗೆ ತಂದ ಬಳಿಕ, ಸರ್ಕಾರ ಈಗ ಅವುಗಳನ್ನು ಹಿಂಪಡೆದು ಪೈಲಟ್‌ಗಳ ಸುರಕ್ಷತೆಯನ್ನು, ಆ ಮೂಲಕ ಪ್ರಯಾಣಿಕರ ಸುರಕ್ಷತೆಯನ್ನು ಅಪಾಯಕ್ಕೆ ತಳ್ಳಿದೆ,” ಎಂದರು.
“ಪೈಲಟ್‌ಗಳ ಕನಿಷ್ಟ ವಿಶ್ರಾಂತಿಗಾಗಿ ರೂಪಿಸಿದ್ದ ನಿಯಮಗಳನ್ನು ರದ್ದುಪಡಿಸುವ ಮೂಲಕ ಸರ್ಕಾರ ಪ್ರಯಾಣಿಕರ ಜೀವಿತವನ್ನೇ ಅಪಾಯಕ್ಕೆ ತಳ್ಳಿದೆ. ಸುರಕ್ಷತೆ ಕುರಿತು ಸರ್ಕಾರದ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿ ಈಗ ಸ್ಪಷ್ಟವಾಗಿದೆ,” ಎಂದು ಹೇಳಿದರು.
“ಬಿಜೆಪಿ ಸರ್ಕಾರವು ದೇಶದ ಮೂಲಸೌಕರ್ಯ ಕ್ಷೇತ್ರಗಳಲ್ಲಿ ಯಾವುದೇ ಸ್ಪರ್ಧೆಯನ್ನು ಉಳಿಸುವ ಪ್ರಯತ್ನ ಮಾಡಿಲ್ಲ. ವಿಮಾನಯಾನ, ದೂರಸಂಪರ್ಕ, ಬಂದರು ಹಾಗೂ ಇತರ ಕ್ಷೇತ್ರಗಳ ಪ್ರಮುಖ ಆಸ್ತಿಗಳು ಒಂದೆರಡು ಕಂಪೆನಿಯ ಬಳಗಕ್ಕೆ ನೀಡಲಾಗುತ್ತಿದೆ. ಇದು ಸರ್ಕಾರದ ‘ಕ್ರೋನಿ ಕ್ಯಾಪಿಟಲಿಸಂ’ ಮಾದರಿ,” ಎಂದು ಕಿಡಿಕಾರಿದರು.
“ಈ ಅವ್ಯವಸ್ಥೆ ಕೇಂದ್ರ ಸರ್ಕಾರವೇ ಸೃಷ್ಟಿಸಿದ ವಿಪತ್ತು. ದಿನದಿಂದ ದಿನಕ್ಕೆ ಕೈಗೊಂಡ ತಪ್ಪು ನೀತಿಗಳು, ನಿರ್ಲಕ್ಷ್ಯ ಮತ್ತು ಆಪ್ತ ಕಂಪನಿಗಳ ಪರವಾಗಿರುವ ವ್ಯವಹಾರಗಳು ದೇಶದ ವಿಮಾನೋದ್ಯಮವನ್ನು ಕುಸಿತದ ಅಂಚಿನತ್ತ ಕೊಂಡೊಯ್ದಿವೆ,” ಎಂದು ಸಸಿಕಾಂತ್ ಸೆಂಥಿಲ್ ಆರೋಪಿಸಿದರು.