ಅಂತರ್‌ರಾಜ್ಯ ವಾಹನ, ಸರಗಳ್ಳನ ಬಂಧನ
ಕುಖ್ಯಾತ ಅಂತರ್ ರಾಜ್ಯ ವಾಹನ ಹಾಗೂ ಸರಗಳ್ಳತನ ಆರೋಪಿಯನ್ನು ಮಂಗಳೂರು ಪೂರ್ವ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಕೇರಳ ರಾಜ್ಯದ ತಿರುವನಂತಪುರಂ ನಿವಾಸಿ ಆದಿತ್ ಗೋಪಾನ್ (ಮುತ್ತು ಕೃಷ್ಣ) ಬಂಧಿತ ಆರೋಪಿ. ಬಂಧಿತನಿಂದ ನಾಲ್ಕು ದ್ವಿಚಕ್ರ ವಾಹನಗಳು ಹಾಗೂ ಎರಡು ಚಿನ್ನದ ಸರಗಳು ಸೇರಿ ಸುಮಾರು 5 ಲಕ್ಷ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ನವೆಂಬರ್ 21ರಂದು ಕದ್ರಿ ಬಟ್ಟಗುಡ್ಡೆ ಬಳಿ 83 ವರ್ಷದ ವಯೋವೃದ್ಧ ಮಹಿಳೆಯ ಚಿನ್ನದ ಸರ ಕಸಿದುಕೊಂಡ ಪರಾರಿಯಾದ ಬಗ್ಗೆ ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆಗಾಗಿ ವಿಶೇಷ ತಂಡ ರಚಿಸಲಾಗಿತ್ತು. ಡಿಸೆಂಬರ್ 4ರಂದು ಕದ್ರಿ ಜೋಗಿ ಮಠದ ಬಳಿ ವಾಹನ ತಪಾಸಣೆ ನಡೆಸುವ ವೇಳೆ ದ್ವಿಚಕ್ರ ವಾಹನದಲ್ಲಿ ಸಂಶಯಾಸ್ಪದವಾಗಿ ಬರುತ್ತಿದ್ದ ವ್ಯಕ್ತಿಯನ್ನು ನಿಲ್ಲಿಸಿ ವಿಚಾರಿಸಿದ್ದಾರೆ. ಈ ವೇಳೆ ಪ್ರಕರಣ ಬೆಳಕಿಗೆ ಬಂದಿದೆ. ಬಂಧಿತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಮುಂದಿನ ತನಿಖೆಗೆ 3 ದಿನಗಳ ಪೊಲೀಸ್ ವಶಕ್ಕೆ ಪಡೆಯಲಾಗಿದೆ.
ಆರೋಪಿಯ ವಿರುದ್ಧ ನ. 21ರಂದು ಕದ್ರಿ ಬಟ್ಟಗುಡ್ಡೆ ಬಳಿ 1.5 ಪವನ್ ಚಿನ್ನದ ಸರ ಸುಲಿಗೆ, ಸೆ. 27ರಂದು ಮುಲ್ಕಿಯಲ್ಲಿ ಒಂಟಿ ಮಹಿಳೆಗೆ ಚೂರಿ ತೋರಿಸಿ 2 ಪವನ್ ಚಿನ್ನದ ಸರ ಸುಲಿಗೆ ಪ್ರಕರಣ, ಬೈಂದೂರು, ಕುಂದಾಪುರದಲ್ಲಿ ದ್ವಿಚಕ್ರ ವಾಹನ ಕಳವು ಪ್ರಕರಣ, ಸುರತ್ಕಲ್ ಚೊಕ್ಕಬೆಟ್ಟು ಬಳಿ ದ್ವಿಚಕ್ರ ವಾಹನ ಕಳವು, ಸುರತ್ಕಲ್ ಅಗರಮೇಲು ಬಳಿ ದ್ವಿಚಕ್ರ ವಾಹನ ಕಳವು ಪ್ರಕರಣಗಳು ದಾಖಲಾಗಿವೆ. ಆರೋಪಿಯಿಂದ ನಾಲ್ಕು ದ್ವಿಚಕ್ರ ವಾಹನಗಳು ಹಾಗೂ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ.
ಆರೋಪಿಯು ತಮಿಳುನಾಡಿನಲ್ಲಿ ಮನೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದ 4 ಪ್ರಕರಣಗಳಲ್ಲಿ ಆರೋಪಿಯಾಗಿದ್ದು, ನಾಗರಕೋಯಿಲ್ ಜೈಲಿನಲ್ಲಿ ಸೆರೆವಾಸ ಅನುಭವಿಸಿದ್ದಾನೆ. ಜೈಲಿನಿಂದ ಬಿಡುಗಡೆಯಾದ ನಂತರ ರೈಲು ಪ್ರಯಾಣವನ್ನು ಬಳಸಿಕೊಂಡು ದೇಶದಾದ್ಯಂತ ಸಂಚರಿಸುತ್ತಿದ್ದ. ರೈಲ್ವೇ ನಿಲ್ದಾಣಗಳ ಬಳಿ ನಿಲ್ಲಿಸಿದ್ದ ದ್ವಿಚಕ್ರ ವಾಹನಗಳನ್ನು ಕಳವು ಮಾಡಿ ಸರಗಳ್ಳತನ ನಡೆಸುತ್ತಿದ್ದ. ಬಳಿಕ ಮತ್ತೆ ರೈಲಿನಲ್ಲಿ ಬೇರೆ ಕಡೆಗೆ ತೆರಳಿ ತಲೆಮರೆಸಿಕೊಳ್ಳುತ್ತಿದ್ದನು ಎನ್ನುವುದು ತನಿಖೆಯಲ್ಲಿ ತಿಳಿದು ಬಂದಿದೆ.
ಮಂಗಳೂರು ಪೂರ್ವ ಠಾಣಾ ನಿರೀಕ್ಷಕ ಅನಂತ ಪದ್ಮಾನಾಭ ಹಾಗೂ ಕದ್ರಿ ಠಾಣಾ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಭಾಗಿಯಾಗಿದರು.