-->
ಕ್ರಿಸ್ಮಸ್ ವೇಳೆ ಕ್ರೈಸ್ತ ಸಮುದಾಯದ ಮೇಲೆ ದಾಳಿ: ಧಾರ್ಮಿಕ ಸ್ವಾತಂತ್ರ‍್ಯದ ಮೇಲಿನ ಹಲ್ಲೆ- ಡೆನಿಸ್ ಡೆಸಾ

ಕ್ರಿಸ್ಮಸ್ ವೇಳೆ ಕ್ರೈಸ್ತ ಸಮುದಾಯದ ಮೇಲೆ ದಾಳಿ: ಧಾರ್ಮಿಕ ಸ್ವಾತಂತ್ರ‍್ಯದ ಮೇಲಿನ ಹಲ್ಲೆ- ಡೆನಿಸ್ ಡೆಸಾ


ಕ್ರಿಸ್ಮಸ್ ಹಬ್ಬದ ಸಂದರ್ಭದಲ್ಲಿ ದೇಶದಾದ್ಯಂತ ಕ್ರೈಸ್ತ ಸಮುದಾಯ ಮೇಲೆ ನಡೆದಿರುವ ದಾಳಿಗಳು ಧಾರ್ಮಿಕ ಸ್ವಾತಂತ್ರ‍್ಯದ ಮೇಲೆ ನಡೆದ ಹಲ್ಲೆಯಾಗಿದೆ ಎಂದು ಉಡುಪಿ ಕಥೊಲಿಕ್ ಧರ್ಮಪ್ರಾಂತ್ಯ ತೀವ್ರ ಕಳವಳ ಹಾಗೂ ನೋವು ವ್ಯಕ್ತಪಡಿಸಿದೆ. 

ಜಗತ್ತಿಗೆ ಶಾಂತಿ, ಪ್ರೀತಿ, ಕ್ಷಮೆಯನ್ನು ಭೋದಿಸಿದ ಯೇಸು ಸ್ವಾಮಿಯ ಜನನದ ಹಬ್ಬ ಈವರ್ಷ ಭಾರತದ ಕ್ರೈಸ್ತ ಸಮುದಾಯಕ್ಕೆ ಭಯ ಮತ್ತು ಆತಂಕವನ್ನು ಸೃಷ್ಟಿ ಮಾಡಿದೆ. ಕರ್ನಾಟಕವೂ ಸೇರಿದಂತೆ ದೇಶದ ವಿವಿಧ ರಾಜ್ಯಗಳಾದ ಕೇರಳ, ನವದೆಹಲಿ ಉತ್ತರಪ್ರದೇಶ, ರಾಜಸ್ಥಾನ, ಉತ್ತರಕಾಂಡ, ಒರಿಸ್ಸಾ ಸೇರಿದಂತೆ ವಿವಿಧೆಡೆ ಕ್ರಿಸ್ಮಸ್ ಆಚರಣೆಯ ವೇಳೆ ಮತಾಂಧ ವ್ಯಕ್ತಿಗಳು ಹಲ್ಲೆ ನಡೆಸಿರುವುದು ಹಬ್ಬದ ಸಂಭ್ರಮಕ್ಕೆ ಕಪ್ಪು ಚುಕ್ಕೆಯಾಗಿದೆ. ಹಾಳುಗೆಡವಿರುವುದು ಸಂವಿಧಾನದ ತತ್ವದಡಿ ನಂಬಿಕೆ ಇಟ್ಟು ಭಾರತ ಒಂದು ಸರ್ವ ಜನಾಂಗದ ಶಾಂತಿಯ ತೋಟ ಎಂಬ ಬದುಕುತ್ತಿರುವ ಕ್ರೈಸ್ತ ಸಮುದಾಯಕ್ಕೆ ನೋವು ತಂದಿದೆ ಎಂದು ಉಡುಪಿ ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ ಡೆನಿಸ್ ಡೆಸಾ ಕಳವಳ ವ್ಯಕ್ತಪಡಿಸಿದ್ದಾರೆ. 

ದೇಶದ ಪ್ರಧಾನ ಮಂತ್ರಿಗಳು ದೆಹಲಿಯ ಚರ್ಚಿನಲ್ಲಿ ಕ್ರಿಸ್ಮಸ್ ಪ್ರಾರ್ಥನೆಗೆ ಜೊತೆಯಾಗುತ್ತಿದ್ದರೆ ಇನ್ನೊಂದೆಡೆ ದೇಶದ ವಿವಿಧ ರಾಜ್ಯಗಳಲ್ಲಿ ಮತಾಂಧ ವ್ಯಕ್ತಿಗಳ ಅದೇ ಕ್ರಿಸ್ಮಸ್ ಹಬ್ಬದ ಆಚರಣೆಯ ಮೇಲೆ ದಾಳಿ ನಡೆಸುತ್ತಿದ್ದಾರೆ. ಪ್ರಧಾನಿಯವರ ಕ್ರಿಸ್ಮಸ್ ಹಬ್ಬದ ಕಾಳಜಿ ಶ್ಲಾಘನೀಯವಾದರೂ ಅದೇ ವೇಳೆ ಅವರ ಅನುಯಾಯಿಗಳು ಎನಿಸಿಕೊಂಡವರು ದೇಶದಾದ್ಯಂತ ಕ್ರಿಸ್ಮಸ್ ಆಚರಣೆಗಳ ಮೇಲೆ ದಾಳಿ ನಡೆಸಿರುವುದು ಸಂವಿಧಾನದ ಮೌಲ್ಯಗಳ ಮೇಲೆ ಸವಾರಿ ಮಾಡಿದಂತಿದೆ.

ಭಾರತದಲ್ಲಿ ಪ್ರತಿಯೊಂದು ಧರ್ಮಕ್ಕೂ ಅವರ ಆರಾಧನೆಯನ್ನು ಮಾಡಿಕೊಂಡು ಹೋಗಲು ಸಂವಿಧಾನ ಸಮಾನ ಅವಕಾಶವನ್ನು ಕಲ್ಪಿಸಿದ್ದು ಅದಕ್ಕೆ ಬೆದರಿಕೆ ಹಾಕುವ ವರ್ತನೆಯನ್ನು ಯಾರೂ ಕೂಡ ಸಹಿಸುವಂತಿಲ್ಲ. ಈ ವರ್ಷದ ಕ್ರಿಸ್ಮಸ್ ಆಚರಣೆಗೆ ಕ್ರೈಸ್ತ ಬಾಂಧವರ ಮೇಲೆ ನಡೆದ ಹಲ್ಲೆ ದೌರ್ಜನ್ಯಗಳು ಒಂದು ರೀತಿಯ ನೋವಿನ ಬಹುಮಾನ ನೀಡಿದಂತಾಗಿದೆ. ಅಲ್ಪಸಂಖ್ಯಾತರು ದೇಶದ ಆಡಳಿತದಲ್ಲಿ ಇನ್ನೂ ಕೂಡ ಸುಭದ್ರವಾಗಿಲ್ಲ ಎನ್ನುವುದು ಇದರಿಂದ ಸ್ಪಷ್ಟಪಡಿಸಿದಂತಾಗಿದೆ. 

ದೇಶದ ಎಲ್ಲಾ ರಾಜ್ಯಗಳು ಅಲ್ಪಸಂಖ್ಯಾತ ಸಮುದಾಯದ ರಕ್ಷಣೆಗೆ ಮೊದಲ ಆದ್ಯತೆ ನೀಡುವುದರೊಂದಿಗೆ ಇಂತಹ ಸಂವಿಧಾನ ವಿರೋಧಿ ಕೃತ್ಯಗಳನ್ನು ನಡೆಸುತ್ತಿರುವ ಮತಾಂಧ ಶಕ್ತಿಗಳ ವಿರುದ್ದ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ದೇಶದ ಆಡಳಿತದ ಚುಕ್ಕಾಣಿ ನಡೆಸುತ್ತಿರುವವರು ಎಲ್ಲಾ ರಾಜ್ಯಗಳಿಗೆ ಸೂಕ್ತ ನಿರ್ದೇಶನ ನೀಡುವುದರೊಂದಿಗೆ ಕ್ರೈಸ್ತ ಸಮುದಾಯ ಹಾಗೂ ಅವರು ನಡೆಸುತ್ತಿರುವ ಎಲ್ಲಾ ಸಂಸ್ಥೆಗಳಿಗೆ ಭದ್ರತೆ ನೀಡುವಂತೆ ಡೆನಿಸ್ ಡೆಸಾ ಮಾಧ್ಯಮ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ. 

Ads on article

Advertise in articles 1

advertising articles 2

Advertise under the article