ಆದೇಶ ಕಡ್ಡಾಯಗೊಳಿಸಿದವರೇ ನಿಯಮ ಪಾಲಿಸಿಲ್ಲ: ಕೋಡಿಬೆಂಗ್ರೆ ಬೋಟ್ ದುರಂತ ಬೆನ್ನಲ್ಲೇ ವಿವಾದ(Video)
ಉಡುಪಿಯ ಕೋಡಿಬೆಂಗ್ರೆ ಪ್ರವಾಸಿ ಬೋಟು ಮುಳುಗಡೆ ದುರಂತದಲ್ಲಿ ಮೂವರು ಜೀವ ಕಳೆದುಕೊಂಡ ಬೆನ್ನಲ್ಲೇ, ಪ್ರವಾಸಿ ಬೋಟುಗಳಲ್ಲಿ ಲೈಫ್ ಜಾಕೆಟ್ ಧರಿಸುವುದು ಕಡ್ಡಾಯ ಎಂದು ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ ಕಠಿಣ ಆದೇಶ ಹೊರಡಿಸಿದ್ದರು. ಆದರೆ ಇದೇ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಲೈಫ್ ಜಾಕೆಟ್ ಧರಿಸದೆ ಬೋಟ್‌ನಲ್ಲಿ ಪ್ರಯಾಣಿಸಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ತೀವ್ರ ಆಕ್ಷೇಪಕ್ಕೆ ಕಾರಣವಾಗಿದೆ.
ದುರ್ಘಟನೆ ನಡೆದ ದಿನವೇ ಸೈಂಟ್ ಮೇರಿಸ್ ದ್ವೀಪದಲ್ಲಿ ನಡೆದ ಗಣರಾಜ್ಯೋತ್ಸವ ಧ್ವಜಾರೋಹಣ ಕಾರ್ಯಕ್ರಮಕ್ಕೆ ಉಸ್ತುವಾರಿ ಸಚಿವೆ ಹಾಗೂ ಅಧಿಕಾರಿಗಳು ಬೋಟ್ ಮೂಲಕ ತೆರಳಿದ್ದರು. ಈ ವೇಳೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹಾಗೂ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ ಲೈಫ್ ಜಾಕೆಟ್ ಧರಿಸದೆ ಬೋಟ್‌ನಲ್ಲಿ ಇದ್ದುದು, ಚಲಿಸುವ ಬೋಟ್‌ನಲ್ಲಿ ನಿಂತು ಸಚಿವೆ ಕೈಬೀಸುತ್ತಿರುವ ದೃಶ್ಯಗಳು ವಿಡಿಯೋದಲ್ಲಿ ಕಾಣಿಸಿಕೊಂಡಿವೆ.
ಪ್ರವಾಸಿ ಬೋಟುಗಳಲ್ಲಿ ಲೈಫ್ ಜಾಕೆಟ್ ಕಡ್ಡಾಯ, ಕಡಲಿಗೆ ಇಳಿಯುವ ಮುನ್ನ ಎಲ್ಲರೂ ಜಾಕೆಟ್ ಧರಿಸಬೇಕು, ಲೈಫ್ ಜಾಕೆಟ್ ಬಳಕೆಯ ಕುರಿತು ಕರಪತ್ರ ಹಾಗೂ ಪ್ರೀ-ರೆಕಾರ್ಡೆಡ್ ಆಡಿಯೋ ಅಳವಡಿಸಬೇಕು ಎಂಬ ಕಟ್ಟುನಿಟ್ಟಿನ ಸೂಚನೆಗಳನ್ನು ಜಿಲ್ಲಾಧಿಕಾರಿಗಳೇ ನೀಡಿದ್ದರೂ, ಅದೇ ನಿಯಮವನ್ನು ಅಧಿಕಾರಿಗಳೇ ಪಾಲಿಸಿಲ್ಲ ಎಂಬ ಆರೋಪಗಳು ಕೇಳಿಬರುತ್ತಿವೆ.
“ಕಾನೂನು ಜನರಿಗೆ ಮಾತ್ರವೇ? ಅಧಿಕಾರಿಗಳಿಗೆ ಅಲ್ಲವೇ?” ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಎದ್ದಿದ್ದು, ಸೂಕ್ತ ಮುನ್ನೆಚ್ಚರಿಕೆ ಕೈಗೊಳ್ಳದೆ ಮಾದರಿಯಾಗಬೇಕಾದವರೇ ನಿಯಮ ಉಲ್ಲಂಘಿಸಿರುವುದಾಗಿ ಟೀಕೆಗಳು ವ್ಯಕ್ತವಾಗಿವೆ.