ವಂಚನೆ ಪ್ರಕರಣ; ಮದುವೆಗೆ ಒಪ್ಪಿಗೆ ಸೂಚಿಸಿದ ಕೃಷ್ಣ ಜೆ ರಾವ್ ಕುಟುಂಬ
ಪುತ್ತೂರಿನಲ್ಲಿ ಯುವತಿಗೆ ಮಗು ಕರುಣಿಸಿ ಬಳಿಕ ಮದುವೆ ನಿರಾಕರಿಸುತ್ತಿದ್ದ ಕೃಷ್ಣ ಜೆ. ರಾವ್ ಕುಟುಂಬ ಮದುವೆಗೆ ಒಪ್ಪಿಗೆ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ಜ.24ರಂದು ನಿಗದಿಯಾಗಿದ್ದ ಮಗುವಿನ ನಾಮಕರಣವನ್ನು ಸದ್ಯ ಕೈಬಿಡಲಾಗಿದೆ. ಜನವರಿ 31ರೊಳಗೆ ಮದುವೆ ನಡೆಯದಿದ್ದರೆ ಫೆಬ್ರವರಿ 7ರಂದು ನಾಮಕರಣ ಕಾರ್ಯಕ್ರಮ ನಡೆಯಲಿದೆ. ನಂತರ ಯಾವುದೇ ಸಂಧಾನ ಇಲ್ಲ ಎಂದು ಹಿಂದುಳಿದ ವರ್ಗಗಳ ಅಯೋಗದ ಸದಸ್ಯೆ ಪ್ರತಿಭಾ ಕುಳಾಯಿ ಹೇಳಿದ್ದಾರೆ.
ಮಂಗಳೂರು ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಜ.24ರಂದು ಕಲ್ಲಡ್ಕದಲ್ಲಿ ಮಗುವಿಗೆ ನಾಮಕರಣಕ್ಕೆ ದಿನ ನಿಗದಿಪಡಿಸಲಾಗಿತ್ತು. ಆದರೆ ಮಗುವಿನ ಅಜ್ಜಿ ನಮಿತಾಗೆ ಆಚಾರ್ಯ ಸಮುದಾಯದ ಉಡುಪಿ ಒಕ್ಕೂಟದ ಪದಾಧಿಕಾರಿ ಮಧು ಆಚಾರ್ಯ ಎಂಬವರು ಕರೆ ಮಾಡಿ ಕೃಷ್ಣ ಜೆ.ರಾವ್ ಅವರ ಕುಟುಂಬ ಮದುವೆಗೆ ಒಪ್ಪಿರುವುದಾಗಿ ತಿಳಿಸಿದ್ದಾರೆ. ಸ್ವಲ್ಪ ಕಾಲಾವಕಾಶ ಕೇಳಿದ್ದಲ್ಲದೆ ತೊಟ್ಟಿಲು ಹಾಕುವ ಕಾರ್ಯಕ್ರಮ ಬೇಡ ಎಂದು ಮನವಿ ಮಾಡಿದ್ದಾರೆ. ಇದಕ್ಕೆ ಒಪ್ಪಿ ನಾಮಕರಣದ ದಿನ ಬದಲಾಯಿಸಲಾಗಿದೆ. ಹಿಂದೆಯೂ ಆರು ತಿಂಗಳು ನಮ್ಮನ್ನು ದಾರಿ ತಪ್ಪಿಸಲಾಗಿದ್ದು ಈ ಬಾರಿ ಹಾಗಾಗಲು ಬಿಡುವುದಿಲ್ಲ ಎಂದು ತಿಳಿಸಿದ್ದಾರೆ. ಸಂಧಾನಕ್ಕೆ ನಮಿತಾ ಮತ್ತು ಆಕೆಯ ಮಗಳು ಮಾತ್ರ ಬರಬೇಕು ಎಂಬ ಷರತ್ತನ್ನು ವಿಧಿಸಿದ್ದು, ನಾವದನ್ನು ಒಪ್ಪುವುದಿಲ್ಲ ಎಂದು ಕುಟುಂಬದವರು ತಿಳಿಸಿದ್ದಾರೆ. ಯಾಕೆಂದರೆ ಅವರಲ್ಲಿಗೆ ಹೋದರೆ ಏನು ಬೇಕಾದರೂ ಆಗಬಹುದೆನ್ನುವ ಭಯವಿದೆ. ಆದರೂ ಸಂಧಾನಕ್ಕೆ ನಾನು ಹಾಗೂ ನಂಜುOಡಿ ಹೋಗುವುದಿಲ್ಲ. ಸಂಧಾನ ಪುತ್ತೂರು ಪೊಲೀಸ್ ಠಾಣೆಯಲ್ಲೇ ಆಗಲಿ ಅಥವಾ ಮಂಗಳೂರು ಎಸ್ಪಿ ಅವರ ಬಳಿ ನಡೆಯಲಿ ಎಂದು ಪ್ರತಿಭಾ ಬೇಡಿಕೆ ಮುಂದಿಟ್ಟಿದ್ದಾರೆ.
ಕೃಷ್ಣ ಜೆ.ರಾವ್ ಕುಟುಂಬ ಮದುವೆಗೆ ಒಪ್ಪುವುದಿಲ್ಲ ಎಂದು ಪುತ್ತೂರು ಶಾಸಕರೂ ಹೇಳಿದ್ದಾರೆ. ಈಗಾಗಲೇ ಈ ಪ್ರಕರಣ ನ್ಯಾಯಾಲಯದಲ್ಲಿದ್ದು ಕೇಸಿನಿಂದ ಹೊರಬರಲು ನಾಟಕ ನಡೆಯುತ್ತಿರುವ ಶಂಕೆ ಇದೆ. ಹಿಂದೆಯೂ ಮಗುವನ್ನು ಆಶ್ರಮಕ್ಕೆ ನೀಡಬೇಕು, ಕೇಸು ಹಿಂದಕ್ಕೆ ಪಡೆಯಬೇಕು, ಮದುವೆಯ ನಂತರ ವಿಚ್ಛೇದನ ಪಡೆಯುವಂತೆ ಬೇಡಿಕೆ ಇಟ್ಟಿದ್ದರು ಎಂದು ಪ್ರತಿಭಾ ಆರೋಪಿಸಿದರು.ಮದುವೆ ಕಾನೂನುಬದ್ಧವಾಗಿ ಆನ್ ಲೈನ್ ಅಥವಾ ಯಾವುದೇ ರೀತಿಯಲ್ಲಾದರೂ ಆಗಲಿ. ಯಾವುದೇ ರೀತಿಯಲ್ಲಾದರೂ ಈ ಪ್ರಕರಣ ಅಂತ್ಯವಾಗಬೇಕು, ಇಬ್ಬರ ತಪ್ಪಿಗೂ ಪ್ರಾಯಶ್ಚಿತವಾಗಬೇಕು. ಮದುವೆಯಾಗಿ ಒಂದಾಗದಿದ್ದರೆ ಕಾನೂನು ಪ್ರಕಾರ ವಿಚ್ಛೇದನ ಪಡೆಯಲಿ. ಯಾವುದೇ ಗೋಷ್ಠಿ ಅಥವಾ ಸಭೆಗಳಿಗೆ ಹೋಗಬಾರದೆಂದು ಷರತ್ತು ವಿಧಿಸಿದ್ದರಿಂದ ನಮಿತಾ ಭಾಗವಹಿಸಿಲ್ಲ.
ಜ.31ರೊಳಗೆ ಮದುವೆ ಆಗದಿದ್ದರೆ ಮುಂದಕ್ಕೆ ಸಂಧಾನವೇ ಇಲ್ಲ, ಫೆ.7ರಂದು ಅದ್ಧೂರಿಯಾಗಿ ಮಗುವಿನ ನಾಮಕರಣ ನಡೆಯಲಿದೆ. ಜೊತೆಗೆ ಕಾನೂನಾತ್ಮಕ ಹೋರಾಟ ಮುಂದುವರಿಯಲಿದೆ ಎಂದು ಪ್ರತಿಭಾ ಎಚ್ಚರಿಸಿದರು.