ನಿಯಮ ಉಲ್ಲಂಘಿಸಿದ ಬಸ್, ಲಾರಿಗಳ ವಿರುದ್ಧ ಪೊಲೀಸ್ ಕಾರ್ಯಾಚರಣೆ:164 ವಾಹನಗಳಿಗೆ ದಂಡ
Thursday, January 29, 2026
ಉಡುಪಿ ಜಿಲ್ಲಾ ರಸ್ತೆ ಸುರಕ್ಷತಾ ಪ್ರಾಧಿಕಾರದ ಸಭೆಯಲ್ಲಿ ಕೈಗೊಳ್ಳಲಾದ ತೀರ್ಮಾನಗಳ ಅನುಷ್ಠಾನಕ್ಕೆ ಮುಂದಾದ ಪೊಲೀಸರು, ಬಾಗಿಲು ಅಳವಡಿಸದ ಬಸ್‌ಗಳು ಹಾಗೂ ವೇಗ ನಿಯಂತ್ರಕ (ಸ್ಪೀಡ್ ಗವರ್ನರ್) ಅಳವಡಿಸದ ಮರಳು ಸಾಗಾಟದ ಲಾರಿಗಳ ವಿರುದ್ಧ ವಿಶೇಷ ಕಾರ್ಯಾಚರಣೆ ಆರಂಭಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ವಿವಿಧೆಡೆ ನಡೆದ ತಪಾಸಣೆಯಲ್ಲಿ ಹಲವು ವಾಹನಗಳಿಗೆ ದಂಡ ವಿಧಿಸಲಾಗಿದೆ.
ಬಸ್‌ಗಳಿಗೆ ಕಡ್ಡಾಯವಾಗಿ ಬಾಗಿಲು ಅಳವಡಿಸುವಂತೆ ಹಾಗೂ ಮರಳು, ಕಲ್ಲು, ಮಣ್ಣು ಸಾಗಾಟದ ವಾಹನಗಳಿಗೆ ವೇಗ ನಿಯಂತ್ರಕ ಅಳವಡಿಸುವಂತೆ ಗಡುವು ನಿಗದಿಪಡಿಸಲಾಗಿತ್ತು. ಈ ಅವಧಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ಪೊಲೀಸರು ಕಾರ್ಯಾಚರಣೆಗೆ ಮುಂದಾಗಿದ್ದಾರೆ. ಜಿಲ್ಲೆಯ ವಿವಿಧ ಭಾಗಗಳಲ್ಲಿ ಒಟ್ಟು 1100 ಬಸ್‌ಗಳನ್ನು ಪರಿಶೀಲಿಸಲಾಗಿದ್ದು, ಬಾಗಿಲು ಅಳವಡಿಸದಿರುವುದು ಸೇರಿದಂತೆ ವಿವಿಧ ನಿಯಮ ಉಲ್ಲಂಘನೆ ಕಂಡುಬಂದ 108 ಬಸ್‌ಗಳಿಗೆ ದಂಡ ವಿಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ತಿಳಿಸಿದ್ದಾರೆ.
ಅದೇ ರೀತಿ ಮರಳು, ಕಲ್ಲು ಹಾಗೂ ಮಣ್ಣು ಸಾಗಾಟ ಮಾಡುವ 1352 ವಾಹನಗಳನ್ನು ಪರಿಶೀಲನೆ ನಡೆಸಲಾಗಿದ್ದು, ಓವರ್‌ಲೋಡ್, ವೇಗ ನಿಯಂತ್ರಕ ಅಳವಡಿಸದಿರುವುದು ಸೇರಿದಂತೆ ವಿವಿಧ ನಿಯಮ ಉಲ್ಲಂಘನೆಗಳಿಗೆ 56 ವಾಹನಗಳಿಗೆ ದಂಡ ವಿಧಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಇದರ ಜೊತೆಗೆ ಬಸ್ ಸಮಯದ ಸಮಸ್ಯೆಗಳು ಹಾಗೂ ಇತರೆ ವಿಚಾರಗಳ ಕುರಿತು ಚರ್ಚಿಸಲು ಜ.29ರಂದು ಮಧ್ಯಾಹ್ನ 3 ಗಂಟೆಗೆ ನಗರ ಬಸ್ ಮಾಲೀಕರೊಂದಿಗೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಭೆ ಕರೆದಿರುವುದಾಗಿ ತಿಳಿಸಲಾಗಿದೆ.
ರಸ್ತೆ ಸಾರಿಗೆ ಪ್ರಾಧಿಕಾರ ಹಾಗೂ ರಸ್ತೆ ಸುರಕ್ಷತಾ ಪ್ರಾಧಿಕಾರದ ಸಭೆಗಳಲ್ಲಿ ಜಿಲ್ಲಾಧಿಕಾರಿಗಳ ನೇತೃತ್ವದ ಸಮಿತಿ ಕೈಗೊಂಡ ತೀರ್ಮಾನಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ಮುಂದಿನ ದಿನಗಳಲ್ಲಿಯೂ ಬಸ್ ಹಾಗೂ ಲಾರಿಗಳ ವಿರುದ್ಧ ಹಂತ ಹಂತವಾಗಿ ಈ ರೀತಿಯ ಕಟ್ಟುನಿಟ್ಟಿನ ಕಾರ್ಯಾಚರಣೆ ಮುಂದುವರಿಸಲಾಗುವುದು ಎಂದು ಎಸ್ಪಿ ಸ್ಪಷ್ಟಪಡಿಸಿದ್ದಾರೆ.



