ಬಸ್ ಗಳಿಗೆ ಬಾಗಿಲು ಅಳವಡಿಕೆಗೆ ಜೂ. 1ರವರೆಗೆ ಕಾಲಾವಕಾಶ: ಎಸ್ಪಿ ಹರಿರಾಮ್ ಶಂಕರ್
ಉಡುಪಿ ಜಿಲ್ಲೆಯಲ್ಲಿ ಸಂಚರಿಸುವ ಖಾಸಗಿ ಬಸ್‌ಗಳು ಸೇರಿದಂತೆ ಎಲ್ಲಾ ಬಸ್‌ಗಳಿಗೆ ಕಡ್ಡಾಯವಾಗಿ ಬಾಗಿಲು ಅಳವಡಿಕೆಗೆ ನೀಡಿರುವ ಕಾಲಾವಕಾಶವನ್ನು ಜೂ. 1ರವರೆಗೆ ವಿಸ್ತರಿಸಲಾಗಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಹರಿರಾಮ್ ಶಂಕರ್ ಹೇಳಿದ್ದಾರೆ.
ಬಸ್ ಮಾಲಕರ ಸಂಘದೊಂದಿಗೆ ಇಂದು ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಅಧ್ಯಕ್ಷತೆಯಲ್ಲಿ ಇಂದು ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕರೆಯಲಾದ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ.
ಸಾರ್ವಜನಿಕರ ಹಾಗೂ ವಿದ್ಯಾರ್ಥಿಗಳ ಸುರಕ್ಷತೆಯ ದೃಷ್ಟಿಯಿಂದ ಎಲ್ಲಾ ಬಸ್ಸುಗಳಿಗೆ ಡೋರ್‌ಗಳನ್ನು ಶೀಘ್ರವಾಗಿ ಅಳವಡಿಸಬೇಕಾಗಿರುತ್ತದೆ, ಆದರೆ ಮಾರ್ಚ್ ವರೆಗೆ ಶಾಲೆಗಳು ನಡೆಯುತ್ತಿರುವುದರಿಂದ ಮತ್ತು ವಿದ್ಯಾರ್ಥಿಗಳಿಗೆ ಪರೀಕ್ಷೆಗಳು ನಡೆಯುತ್ತಿರುವುದರಿಂದ ಬಸ್ಸುಗಳು ವ್ಯತ್ಯಯವಾಗುವುದನ್ನು ತಡೆಯಲು ಮತ್ತು ಎಲ್ಲಾ ಬಸ್‌ಗಳಿಗೆ ಬಾಗಿಲುಗಳನ್ನು ಅಳವಡಿಸಲು ಸೀಮಿತ ಗ್ಯಾರೇಜ್ ಗಳು ಮಾತ್ರವೇ ಇರುವುದನ್ನು ಸಹ ಪರಿಗಣಿಸಿ, ಎಲ್ಲಾ ಬಸ್‌ಗಳಿಗೆ ಬಾಗಿಲುಗಳನ್ನು ಅಳವಡಿಸಲು ಜೂನ್ 1 ರವರೆಗೆ ಸಮಯವಕಾಶವನ್ನು ನೀಡಲಾಗಿದೆ.
ಎಫ್ ಸಿ ನವೀಕರಣಕ್ಕೆ ಬಾಕಿ ಇರುವಂತಹ ಬಸ್‌ಗಳಿಗೆ ಜೂನ್ 1 ರೊಳಗಾಗಿ ಬಾಗಿಲನ್ನು ಅಳವಡಿಸುವ ಷರತ್ತಿಗೊಳಪಟ್ಟು ಅರ್ಹತೆ ಇದ್ದಲ್ಲಿ ಎಫ್ ಸಿ ನವೀಕರಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಅದಾಗ್ಯೂ ಬಸ್‌ಗಳಿಗೆ ಬಾಗಿಲನ್ನು ಅಳವಡಿಸದಿದ್ದಲ್ಲಿ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದೆಂದು ಬಸ್ ಮಾಲಕರಿಗೆ ತಿಳಿಸಲಾಯಿತು. ಅಲ್ಲದೇ ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಪುಟ್ ಬೋರ್ಡ್ ನಲ್ಲಿ ನಿಂತು ಪ್ರಯಾಣಿಸದಂತೆ ಬಾಗಿಲುಗಳನ್ನು ಅಳವಡಿಸುವವರೆಗೆ ಅರಿವು ಮೂಡಿಸುವ ಕೆಲಸ ಮಾಡುವಂತೆಯೂ ಕೂಡಾ ಸೂಚಿಸಲಾಯಿತು.
