-->
ಕುಂದೇಶ್ವರ ಸಮ್ಮಾನ್, ಕಲಾಭೂಷಣ ಪ್ರಶಸ್ತಿ ಪ್ರದಾನ

ಕುಂದೇಶ್ವರ ಸಮ್ಮಾನ್, ಕಲಾಭೂಷಣ ಪ್ರಶಸ್ತಿ ಪ್ರದಾನ


ಹಿರ್ಗಾನದ ಕುಂದೇಶ್ವರ ಉತ್ಸವದಲ್ಲಿ ಯಕ್ಷಗಾನ ಭಾಗವತರಾದ ಕಾವ್ಯಶ್ರೀ ಅಜೇರು ಅವರಿಗೆ ಶ್ರೀ ಕುಂದೇಶ್ವರ ಸಮ್ಮಾನ್ ಪ್ರಶಸ್ತಿ ಮತ್ತು ರಂಗಭೂಮಿ ಕಲಾವಿದ ಉಮೇಶ್ ಮಿಜಾರು ಅವರಿಗೆ ಕುಂದೇಶ್ವರ ಕಲಾಭೂಷಣ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಪ್ರಶಸ್ತಿ ಪ್ರದಾನ ಮಾಡಿದ ಶಾಸಕ ವಿ. ಸುನಿಲ್ ಕುಮಾರ್ ಮಾತನಾಡಿ, ಧಾರ್ಮಿಕ ಕ್ಷೇತ್ರದಲ್ಲಿ ಯಕ್ಷಗಾನ, ತಾಳಮದ್ದಲೆ ಸಾಂಸ್ಕೃತಿಕ ಗಳನ್ನು ಆಯೋಜಿಸಿ ಸಾಧಕ ಕಲಾವಿದರನ್ನು ಗೌರವಿಸುವ ಕೆಲಸ ಶ್ಲಾಘನೀಯ ಎಂದರು. 

 


ಶ್ರೀ ನಾರಾಯಣಗುರು ನಿಗಮದ ಅಧ್ಯಕ್ಷ ಮಂಜುನಾಥ ಪೂಜಾರಿ ಮುದ್ರಾಡಿ ಮಾತನಾಡಿ, ಕುಂದೇಶ್ವರ ಕ್ಷೇತ್ರವು ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ರಾಜ್ಯದ ಗಮನ ಸೆಳೆದಿದೆ ಎಂದರು.

  ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ವ್ಯವಸ್ಥಾಪಕ ನಿರ್ದೇಶಕ ಉದಯ ಶೆಟ್ಟಿ ಮುನಿಯಾಲು ಮಾತನಾಡಿ, ಕ್ಷೇತ್ರದ ಮೂಲಸೌಕರ್ಯ ಹೆಚ್ಚಳಕ್ಕೆ ದೇವಸ್ಥಾನದ ಸಂಪರ್ಕ ರಸ್ತೆಗಳನ್ನ ಮೇಲ್ದರ್ಜೆಗೆ ಏರಿಸಬೇಕು ಎಂದು ಹೇಳಿದರು.

ಪ್ರಶಸ್ತಿ ಸ್ವೀಕರಿಸಿದ ಕಾವ್ಯಶ್ರೀ ಅಜೇರು ಮಾತನಾಡಿ, ಇಂತಹ ಶ್ರೇಷ್ಠ ಸಮ್ಮಾನದ ಗೌರವಕ್ಕೆ ಪಾತ್ರರಾಗಿರುವುದು ಹೊಣೆಗಾರಿಕೆಯನ್ನು ಹೆಚ್ಚಿಸಿದೆ. ಯಕ್ಷಗಾನದಲ್ಲಿ ಪ್ರಾಂಜಲ ಮನಸ್ಸಿನಿಂದ ಕಲಾ ಸೇವೆಯನ್ನು ಮಾಡುತ್ತೇನೆ ಎಂದರು.

ಉಮೇಶ್ ಮಿಜಾರು ಮಾತನಾಡಿ, ಪುಣ್ಯಕ್ಷೇತ್ರಗಳಲ್ಲಿ ರಂಗಭೂಮಿಯ ಕಲಾವಿದರಿಗೆ ಪ್ರಶಸ್ತಿ ಗೌರವ ನೀಡುವುದರಿಂದ ರಂಗಕಲೆಗಳಿಗೆ ಉತ್ತೇಜನ ಲಭಿಸುತ್ತದೆ ಎಂದರು.

ಯಕ್ಷ ಕಲಾರಂಗದ ಅಧ್ಯಕ್ಷ ವಿಜಯ ಶೆಟ್ಟಿ, ನಿಟ್ಟೆ ಪಂಚಾಯಿತಿ ಮಾಜಿ ಅಧ್ಯಕ್ಷ ನವೀನ್ ನಾಯಕ್, ಧರ್ಮದರ್ಶಿಗಳಾದ ಗಂಗಾ ಆರ್ ಭಟ್, ಪ್ರಧಾನ ಅರ್ಚಕರಾದ ಕೃಷ್ಣರಾಜೇಂದ್ರ ಭಟ್, ವೇದಮೂರ್ತಿ ರವೀಂದ್ರ ಭಟ್,  ಕಾರ್ಯಕ್ರಮ ಸಂಯೋಜಕ ಜಿತೇಂದ್ರ ಕುಂದೇಶ್ವರ, ಸೃಷ್ಟಿ ಕಲಾವಿದ್ಯಾಲಯ ಸಂಸ್ಥಾಪಕ ಛಾಯಾಪತಿ ಕಂಚಿಬೈಲ್, ಉದ್ಯಮಿ ಸತೀಶ್ ಭಟ್ ಕುಂದೇಶ್ವರ, ಸಿರಿಯಣ್ಣ ಶೆಟ್ಟಿ, ಪಂಚಾಯತ್ ಅಧ್ಯಕ್ಷೆ ಸುನಿತಾ ಪೂಜಾರಿ, ಅರ್ಚಕರಾದ ಸುಧೀಂದ್ರ ಭಟ್, ಸುಜ್ಞೇಂದ್ರ ಭಟ್ ಇದ್ದರು. ಈ ಸಂದರ್ಭ ಶ್ರೀ ನಾರಾಯಣಗುರು ನಿಗಮದ ಅಧ್ಯಕ್ಷ ಮಂಜುನಾಥ ಪೂಜಾರಿ ಮುದ್ರಾಡಿ ಅವರನ್ನು ಗೌರವಿಸಲಾಯಿತು. 

ದೇಗುಲ ದ್ವಾರಕ್ಕೆ ಹಿತ್ತಾಳೆ ಹೊದಿಕೆ ಸಮರ್ಪಿಸಿದ ರಮಾನಾಥ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ರಂಗಿಣಿ ಉಪೇಂದ್ರ ರಾವ್ ಪ್ರಾರ್ಥಿಸಿದರು. 

ಕಾವ್ಯಶ್ರೀ ಅಜೇರು ಮತ್ತು ಲಕ್ಷ್ಮಿ ನಾರಾಯಣ ಹೊಳ್ಳ ದ್ವಂದ್ವ ಭಾಗವತಿಕೆಯಲ್ಲಿ ಕದ್ರಿ ಮಹಿಳಾ ಯಕ್ಷಕೂಟದವರಿಂದ  ತಾಳಮದ್ದಲೆ ನಡೆಯಿತು.

Ads on article

Advertise in articles 1

advertising articles 2

Advertise under the article