ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ ಅವಘಡ: ಕ್ಷಣಾರ್ಧದಲ್ಲಿ ಸುಟ್ಟು ಕರಕಲಾದ ಕಾರು
Saturday, January 31, 2026
ಚಲಿಸುತ್ತಿದ್ದ ಕಾರಿನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡು ಕಾರು ಸಂಪೂರ್ಣವಾಗಿ ಬೆಂಕಿಗಾಹುತಿಯಾದ ಘಟನೆ ಹೆಮ್ಮಾಡಿ- ಕೊಲ್ಲೂರು ರಾಜ್ಯ ಹೆದ್ದಾರಿಯ ವಂಡ್ಸೆ ಗ್ರಾಮದ ಶಾರ್ಕೆ ಕ್ರಾಸ್ ಸಮೀಪ ಇಂದು ಬೆಳಿಗ್ಗೆ ಸಂಭವಿಸಿದೆ.
ಬೀಜಾಡಿ ನಿವಾಸಿ ಭಾಸ್ಕರ್ ಆಚಾರ್ ಅವರಿಗೆ ಸೇರಿದ ಕಾರು ಇದಾಗಿದ್ದು, ಕಾರ್ಯಕ್ರಮ ನಿಮಿತ್ತ ಬೆಳಿಗ್ಗೆ ಆಲೂರಿಗೆ ತೆರಳಿದ್ದ ಅವರು ಸುಮಾರು 10 ಗಂಟೆಯ ವೇಳೆಗೆ ಅಲ್ಲಿಂದ ಕುಂದಾಪುರದತ್ತ ಮರಳುತ್ತಿದ್ದರು. ಈ ವೇಳೆ ಕಾರಿನ ಮುಂಭಾಗದಿOದ ಶಬ್ದ ಸಹಿತ ಹೊಗೆ ಕಾಣಿಸಿಕೊಂಡಿದೆ. ತಕ್ಷಣ ಎಚ್ಚೆತ್ತುಕೊಂಡ ಭಾಸ್ಕರ್ ಆಚಾರ್ ಕಾರನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿದ್ದಾರೆ.
ಆದರೆ ಆಗಲೇ ಬೆಂಕಿಯ ತೀವ್ರತೆ ಹೆಚ್ಚಾಗಿದ್ದು, ಸ್ಥಳೀಯರು ಬೆಂಕಿ ನಂದಿಸಲು ಪ್ರಯತ್ನಿಸಿದರೂ ಪ್ರಯೋಜನವಾಗಿಲ್ಲ. ಸ್ವಲ್ಪ ಹೊತ್ತಿನಲ್ಲೇ ಇಡೀ ಕಾರು ಸುಟ್ಟು ಕರಕಲಾಗಿದೆ. ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
