ವಾರಾಹಿ ನದಿಯಲ್ಲಿ ಅಕ್ರಮ ಮರಳುಗಾರಿಕೆ: 11 ಮಂದಿಯ ಬಂಧನ
Tuesday, February 10, 2026
ಉಡುಪಿ ಜಿಲ್ಲೆಯ ಕಂಡ್ಲೂರು ಬ್ರಿಡ್ಜ್ ಸಮೀಪ ವಾರಾಹಿ ನದಿಯಲ್ಲಿ ಅಕ್ರಮವಾಗಿ ಮರಳುಗಾರಿಕೆ ನಡೆಸುತ್ತಿದ್ದ ಖಚಿತ ಮಾಹಿತಿಯ ಮೇರೆಗೆ ಕುಂದಾಪುರ ವೃತ್ತ ಪೊಲೀಸ್ ನಿರೀಕ್ಷಕರ ನೇತೃತ್ವದ ತಂಡ ದಾಳಿ ನಡೆಸಿದೆ. ಈ ವೇಳೆ ರಾಮಶಂಕರ ರಾಜಬೀರ್ (35), ರಾಮಕುಮಾರ್ (40), ಗೋವಿಂದ ಚೌದರಿ (26), ಶಿವಮುನಿ (32), ಜುನ್ನ ರಾಜಬೀರ್ (35), ಸತ್ಯಾದೇವ (30), ಕಮಲೇಶ ನಿಸಾದ್ (35), ಸಂತೋಷ ನಿಸಾದ್ (23), ಓಂಪ್ರಕಾಶ ರಾಜಬೀರ್ (34), ರಮೇಶ್ ರಾಜಬೀರ್ (35) ಸೇರಿದಂತೆ ಒಟ್ಟು 11 ಮಂದಿಯನ್ನು ಬಂಧಿಸಲಾಗಿದೆ.
ಫೆಬ್ರವರಿ 10ರಂದು ಬೆಳಗಿನ ಜಾವ ಸುಮಾರು 2 ಗಂಟೆ ವೇಳೆಗೆ ಪೊಲೀಸರು ಕಂಡ್ಲೂರು ಬ್ರಿಡ್ಜ್ ಬಳಿ ದಾಳಿ ನಡೆಸಿದಾಗ, ನದಿಯ ಕೆಳಭಾಗದಲ್ಲಿ ದೋಣಿಗಳ ಮೂಲಕ ಅಕ್ರಮವಾಗಿ ಮರಳುಗಾರಿಕೆ ನಡೆಸಲಾಗುತ್ತತ್ತು. ಪೊಲೀಸರನ್ನು ಕಂಡು ದೋಣಿಗಳಲ್ಲಿದ್ದವರು ನದಿಯ ಪೊದೆಯೊಳಗೆ ದೋಣಿಗಳನ್ನು ನಿಲ್ಲಿಸಿ ಅಡಗಿಕೊಂಡಿದ್ದರು. ಬಳಿಕ ಸಿಬ್ಬಂದಿಗಳನ್ನು ಕರೆಸಿ ಹಳ್ನಾಡು ಕೆಆರ್‌ಐಡಿಎಲ್ ಮರಳು ಧಕ್ಕೆಯಿಂದ ದೋಣಿಯಲ್ಲಿ ತೆರಳಿ ನಾಲ್ಕು ಮರಳು ತುಂಬಿದ ದೋಣಿಗಳನ್ನು ವಶಪಡಿಸಿಕೊಳ್ಳಲಾಯಿತು. ಆರೋಪಿಗಳನ್ನು ವಿಚಾರಣೆ ನಡೆಸಿದಾಗ, ಅವರು ಹಳ್ನಾಡು ಕೆಆರ್‌ಐಡಿಎಲ್ ಮರಳು ಧಕ್ಕೆಯ ದಿನಗೂಲಿ ಕಾರ್ಮಿಕರಾಗಿದ್ದು, ಉತ್ತಮ ಗುಣಮಟ್ಟದ ಮರಳು ತರಲು ಹೆಚ್ಚುವರಿ ಹಣ ನೀಡುವುದಾಗಿ ಧಕ್ಕೆಯ ಮಾಲಿಕ ಸುನಿಲ್ ಶೆಟ್ಟಿ ಹಾಗೂ ಸೂಪರ್ವೈಸರ್ ಅಜ್ಮಲ್ ಸೂಚಿಸಿದ್ದರಿಂದ ಜಿಯೋ ಫೆನ್ಸಿಂಗ್ ಮಿತಿಯನ್ನು ಮೀರಿ ರಾತ್ರಿ ವೇಳೆ ನದಿಯಲ್ಲಿ ಅಕ್ರಮವಾಗಿ ಮರಳು ತೆಗೆಯುತ್ತಿದ್ದುದಾಗಿ ಒಪ್ಪಿಕೊಂಡಿದ್ದಾರೆ.
ನಾಲ್ಕು ದೋಣಿಗಳಲ್ಲಿ 4,500 ರೂಪಾಯಿ ಮೌಲ್ಯದ ಸುಮಾರು 3ಳಿ ಯುನಿಟ್ ಮರಳು ಹಾಗೂ ನಾಲ್ಕು ಬಿದಿರಿನ ತೊಳೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಕುರಿತು ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
.jpeg)
