ಅಬಕಾರಿ ಹಗರಣ ಆರೋಪ ಹೊತ್ತ ಅಬಕಾರಿ ಸಚಿವ ಬಿಳಿಯಾರು ಧೂಮಾವತಿ ಸನ್ನಿಧಾನಕ್ಕೆ ಭೇಟಿ
ಅಬಕಾರಿ ಹಗರಣದ ಆರೋಪ ಹೊತ್ತ ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ್ ಅವರು ಕಾಪು ತಾಲೂಕಿನ ಶಿರ್ವ ಸಮೀಪದ ಬಿಳಿಯಾರು ಧೂಮಾವತಿ ದೈವದ ಸನ್ನಿಧಾನಕ್ಕೆ ಭೇಟಿ ನೀಡಿದ್ದು, ಈ ಭೇಟಿ ರಾಜಕೀಯ ಹಾಗೂ ಸಾಮಾಜಿಕ ವಲಯಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಧೂಮಾವತಿ ದೈವದ ನೇಮೋತ್ಸವದ ದಿನದಂದೇ ಸಚಿವರು ಸನ್ನಿಧಾನಕ್ಕೆ ಆಗಮಿಸಿದ್ದು, ಪತ್ನಿಯೊಂದಿಗೆ ದೈವದ ಸನ್ನಿಧಿಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಸನ್ನಿಧಾನದಲ್ಲಿ ನಿರ್ಮಿಸಲಾದ ನೂತನ ಗೋಪುರ ಹಾಗೂ ಹೊಸ ಕಟ್ಟಡವನ್ನು ಉದ್ಘಾಟಿಸಿದರು.
ಈ ಭೇಟಿ ಹಲವು ಕಾರಣಗಳಿಂದ ಗಮನ ಸೆಳೆದಿದ್ದು, ಉಡುಪಿಯ ಬಿಳಿಯಾರು ಮೂಲದ ಹಾಗೂ ಸಚಿವರ ಆಪ್ತ ಎನ್ನಲಾಗಿರುವ ಜೀವನ ಶೆಟ್ಟಿ ಅವರ ಆಹ್ವಾನದ ಮೇರೆಗೆ ಸಚಿವರು ಸನ್ನಿಧಾನಕ್ಕೆ ಆಗಮಿಸಿದ್ದಾರೆ ಎನ್ನಲಾಗಿದೆ. ಜೀವನ ಶೆಟ್ಟಿ ಸದ್ಯ ಧಾರವಾಡದಲ್ಲಿ ವೈನ್ ಮರ್ಚೆಂಟ್ ಅಸೋಸಿಯೇಷನ್‌ನ ಪದಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಇತ್ತೀಚೆಗೆ ಬಹಿರಂಗಗೊಂಡ ಅಬಕಾರಿ ಹಗರಣ ಸಂಬಂಧಿತ ಆಡಿಯೋ ಪ್ರಕರಣದಲ್ಲಿ ಜೀವನ ಶೆಟ್ಟಿ ಅವರ ಹೆಸರು ಕೇಳಿಬಂದಿತ್ತು. ಸಚಿವರ ಹೆಸರನ್ನು ಬಳಸಿ ಅಬಕಾರಿ ವ್ಯಾಪಾರಿಗಳ ಮೇಲೆ ಕಿರುಕುಳ ನೀಡಿದ್ದು, ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾರೆ ಎಂಬ ಆರೋಪಗಳು ಕೇಳಿಬಂದಿದ್ದವು.
ಈ ಆರೋಪಗಳನ್ನು ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ್ ಅವರು ಸಂಪೂರ್ಣವಾಗಿ ತಳ್ಳಿ ಹಾಕಿದ್ದು, ತಮ್ಮ ವಿರುದ್ಧ ಅನಗತ್ಯ ಆರೋಪಗಳನ್ನು ಮಾಡಲಾಗುತ್ತಿದೆ ಎಂದು ಪ್ರತಿಕ್ರಿಯಿಸಿದ್ದರು. ಇದೇ ವೇಳೆ ಜೀವನ ಶೆಟ್ಟಿ ಅವರು ಕೂಡ ತಮ್ಮ ಮೇಲೆ ಹೊರಿಸಲಾಗಿರುವ ಆರೋಪಗಳನ್ನು ನಿರಾಕರಿಸಿ, ಈ ವಿಷಯದಲ್ಲಿ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಹೇಳಿದ್ದರು. ಈ ಎಲ್ಲಾ ಬೆಳವಣಿಗೆಗಳ ನಡುವೆಯೇ ಸಚಿವರ ದೈವದ ಸನ್ನಿಧಾನಕ್ಕೆ ನಡೆದ ಭೇಟಿ ಸಾರ್ವಜನಿಕ ವಲಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ.
