ಗೃಹಲಕ್ಷ್ಮೀ ಫಲಾನುಭವಿಗಳ ಸಮಸ್ಯೆ ಇತ್ಯರ್ಥಕ್ಕೆ ಕ್ರಮ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್
Monday, February 02, 2026
ಜಿಎಸ್‌ಟಿ ಹಾಗೂ ಆದಾಯ ತೆರಿಗೆ ಕಟ್ಟುತ್ತಿದ್ದಾರೆ ಎಂಬ ದಾಖಲೆಗಳ ಕಾರಣದಿಂದ ರಾಜ್ಯದಲ್ಲಿ ಸುಮಾರು 52 ಸಾವಿರ ಮಹಿಳೆಯರಿಗೆ ಗೃಹಲಕ್ಷ್ಮೀ ಯೋಜನೆಯ ಹಣ ಸಿಗುತ್ತಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ತಿಳಿಸಿದ್ದಾರೆ.
ವಿಧಾನ ಪರಿಷತ್‌ನ ವಿಶೇಷ ಅಧಿವೇಶನದಲ್ಲಿ ಸದಸ್ಯ ಪಿ.ಎಚ್. ಪೂಜಾರ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಈ ಪೈಕಿ ಈಗಾಗಲೇ ಸುಮಾರು 20 ಸಾವಿರ ಫಲಾನುಭವಿಗಳ ಸಮಸ್ಯೆಯನ್ನು ಪರಿಹರಿಸಲಾಗಿದೆ. ಉಳಿದವರ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ಕೆಲವರು ಸಣ್ಣ ಮಟ್ಟದಲ್ಲಿ ವ್ಯವಹಾರ ನಡೆಸುವ ಸಂದರ್ಭದಲ್ಲಿ ಜಿಎಸ್‌ಟಿ ಅಥವಾ ಆದಾಯ ತೆರಿಗೆ ವ್ಯಾಪ್ತಿಗೆ ಬರುವುದರಿಂದ ಸಾಫ್ಟ್ವೇರ್‌ನಲ್ಲಿ ಅವರ ಹೆಸರು ಕಾಣಿಸಿಕೊಳ್ಳುತ್ತದೆ. ಇದರಿಂದ ಗೃಹಲಕ್ಷ್ಮೀ ಯೋಜನೆಯ ಹಣ ಬಿಡುಗಡೆಗೆ ಅಡ್ಡಿಯಾಗುತ್ತಿದೆ. ಸರ್ಕಾರ ಅಥವಾ ಇಲಾಖೆಯ ತಪ್ಪಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.
ರಾಜ್ಯದಲ್ಲಿ ಒಟ್ಟು 1.26 ಕೋಟಿ ಫಲಾನುಭವಿಗಳಿದ್ದು, ಗೃಹಲಕ್ಷ್ಮೀ ಯೋಜನೆ ನಿರಂತರ ಪ್ರಕ್ರಿಯೆಯಾಗಿದೆ. ಈ ಸಮಸ್ಯೆಯನ್ನು ಪರಿಹರಿಸುವ ಕುರಿತು ಈಗಾಗಲೇ ಜಿಎಸ್‌ಟಿ ಮತ್ತು ಆದಾಯ ತೆರಿಗೆ ಕೌನ್ಸಿಲ್ ಗಮನಕ್ಕೆ ತರಲಾಗಿದೆ ಎಂದು ಅವರು ತಿಳಿಸಿದರು.