ಕಾರ್ಮಿಕರ ಮರಣ ಶಾಸನ ಬರೆಯಲು ಮುಂದಾದ ಕೇಂದ್ರ ಸರ್ಕಾರ- ಸುರೇಶ್ ಕಲ್ಲಾಗರ ಆಕ್ರೋಶ
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರವು ಜಾರಿಗೆ ತಂದಿರುವ 4 ಕಾರ್ಮಿಕ ಸಂಹಿತೆಯು ಸಂಘಟಿತ ಹಾಗು ಅಸಂಘಟಿತ ಕಾರ್ಮಿಕರ ಮರಣ ಶಾಸನವಾಗಲಿದೆ ಎಂದು ಸಿಐಟಿಯು ರಾಜ್ಯ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಟೀಕಿಸಿದರು.
ಉಡುಪಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಕೇಂದ್ರ ಸರ್ಕಾರವು ದೇಶದ ಕಾರ್ಮಿಕರನ್ನು ಅಗ್ಗದ ದರದಲ್ಲಿ ದೊಡ್ಡ ದೊಡ್ಡ ಕಾರ್ಪೊರೇಟ್ ಕಂಪನಿಗಳಿಗೆ ಮಾರಾಟ ಮಾಡಲು ಮುಂದಾಗಿದೆ. ಪ್ರಧಾನಿ ಮೋದಿ ತನ್ನ ಬಳಗಕ್ಕೆ ಲಾಭ ಮಾಡಿಕೊಡಲು ಹೊರಟಿದ್ದಾರೆ. ಹಿಂದೂ ಕಾರ್ಮಿಕರನ್ನು ವಂಚಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಟೀಕಿಸಿದರು. ರಾಜ್ಯಸರ್ಕಾರವು ಕೇಂದ್ರ ದ ಈ ನೀತಿಯಲ್ಲಿ ರಾಜ್ಯದಲ್ಲಿ ಯಥಾವತ್ತಾಗಿ ಜಾರಿ ಮಾಡಬಾರದು ಎಂದು ಒತ್ತಾಯಿಸಿದರು.
ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿಗಳು ಮತ್ತು 4 ಹೊಸ ಕಾರ್ಮಿಕ ಸಂಹಿತೆಗಳನ್ನು ವಿರೋಧಿಸಿ, ಸಿಐಟಿಯು ಫೆಬ್ರವರಿ 12 ರಂದು ದೇಶವ್ಯಾಪಿ ಸಾರ್ವತ್ರಿಕ ಮುಷ್ಕರಕ್ಕೆ ಕರೆ ನೀಡಿದೆ. ಸಂಘಟಿತ, ಅಸಂಘಟಿತ ಕಾರ್ಮಿಕರು, ರೈತರು, ಮಹಿಳೆಯರು ಮತ್ತು ವಿದ್ಯಾರ್ಥಿ ಸಂಘಟನೆಗಳು ಈ ಮುಷ್ಕರದಲ್ಲಿ ಪಾಲ್ಗೊಳ್ಳಲಿದ್ದು, ಉಡುಪಿಯಲ್ಲೂ ಧರಣಿ ನಡೆಯಲಿದೆ ಎಂದರು. ಉಡುಪಿ, ಬೈಂದೂರು ಕುಂದಾಪುರ ಕಾರ್ಕಳ ಹೀಗೆ ನಾಲ್ಕು ಕಡೆ ಪ್ರತಿಭಟನೆ ನಡೆಯಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಶಶಿಧರ್, ಕವಿರಾಜ್ ಕಾಂಚನ್, ಚಂದ್ರಶೇಖರ್ ವಿ ಮೊದಲಾದವರು ಇದ್ದರು.