ಎ. 4: ಆಟಿಸಂ ಮಕ್ಕಳು ಮತ್ತು ಪೋಷಕರಿಗಾಗಿ "ಕಲಾಸೌರಭ" ಕಾರ್ಯಕ್ರಮ
ಆಟಿಸಂ ಸೊಸೈಟಿ ಉಡುಪಿ ಮತ್ತು ಇನ್ನಿತರ ಸಮಾನ ಮನಸ್ಕ ಸ್ವಯಂ ಸೇವಾ ಸಂಸ್ಥೆಗಳ ಸಹಕಾರದಿಂದ ಆಟಿಸಂ ಮಕ್ಕಳು ಮತ್ತು ಪೋಷಕರಿಗಾಗಿ ಕಳೆದ ನಾಲ್ಕು ವರ್ಷಗಳಿಂದ "ಕಲಾಸೌರಭ" ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದು, ಈ ಬಾರಿ ಎ. 4ರಂದು ಬನ್ನಂಜೆ ಶ್ರೀ ನಾರಾಯಣ ಗುರು ಸಭಾಭವನದಲ್ಲಿ ಬೆಳಿಗ್ಗೆ 9 ರಿಂದ ಸಂಜೆ 4.30ರ ವರೆಗೆ ನಡೆಯಲಿದೆ ಎಂದು ಡಾ. ಎ.ವಿ ಬಾಳಿಗಾ ಸ್ಮಾರಕ ಆಸ್ಪತ್ರೆಯ ನಿರ್ದೇಶಕ ಡಾ. ಪಿ.ವಿ. ಭಂಡಾರಿ ತಿಳಿಸಿದ್ದಾರೆ.
ಉಡುಪಿಯಲ್ಲಿ ಅವರು ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. ಕಾರ್ಯಕ್ರಮದಲ್ಲಿ ವಿಶೇಷ ಚೇತನ ಮಕ್ಕಳು ಮತ್ತು ಪೋಷಕರನ್ನು ಪ್ರೋತ್ಸಾಹಿಸಲು ವೇದಿಕೆಯನ್ನು ಕಲ್ಪಿಸಿಕೊಡಲಾಗುವುದು. ಈ ಮೂಲಕ ಪೋಷಕರು ಸಾಮಾಜಿಕ ಕಳಂಕವನ್ನು ತೊಡೆದು ತಮ್ಮ ವಿಶೇಷ ಮಗುವಿನೊಂದಿಗೆ ಸಮಾಜದಲ್ಲಿ ಗುರುತಿಸಿಕೊಳ್ಳುವಂತೆ ಮಾಡುವುದು ನಮ್ಮ ಉದ್ದೇಶವಾಗಿದೆ. ಈ ಬಾರಿಯ "ಕಲಾಸೌರಭ” ಟಿಎಂಜಿ ಸುನಿಧಿ ಫೌಂಡೇಶನ್ ಟ್ರಸ್ಟ್ ಮಣಿಪಾಲ, ಮಣಿಪಾಲ ಪೇಮೆಂಟ್ ಅಂಡ್ ಐಡೆಂಟಿಟಿ ಸೊಲ್ಯೂಷನ್, ಡಾ. ಎ.ವಿ.ಬಾಳಿಗಾ ಸ್ಮಾರಕ ಆಸ್ಪತ್ರೆ, ಉಡುಪಿ, ಕಮಲ್ ಎ. ಬಾಳಿಗಾ ಚಾರಿಟೇಬಲ್ ಟ್ರಸ್ಟ್ ಮುಂಬೈ, ಒನ್ ಗುಡ್ ಸ್ಟೆಪ್ ಬೆಂಗಳೂರು, ಹರ್ಷ ಉಡುಪಿ, ಗಾಯತ್ರಿ ಎಕ್ಸ್ಪೋರ್ಟ್ಸ್ ಕಾರ್ಕಳ, ಗೀತಾನಂದ ಫೌಂಡೇಶನ್ ಮಣೂರು, ಕೋಟ, ಈಶಾನ್ಯ ಇಂಡಿಯಾ ಫೌಂಡೇಶನ್, ಐಎಂಒ ಬೆಂಗಳೂರು ಇವರ ಸಹಕಾರದಲ್ಲಿ ನಡೆಯಲಿದೆ.
"ಕಲಾಸೌರಭ"ದ ಉದ್ಘಾಟನಾ ಸಮಾರಂಭದಲ್ಲಿ ಮೈಸೂರಿನ ಸ್ವಾಮಿ ವಿವೇಕಾನಂದ ಯೂತ್ ಮೂಮೆಂಟ್‌ನ ಕಾರ್ಯನಿರ್ವಾಹಕ ಅಧಿಕಾರಿ ಸವಿತಾ ಸುಲುಗೋಡು ಅವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ಎ.ವಿ. ಬಾಳಿಗಾ ಸ್ಮಾರಕ ಆಸ್ಪತ್ರೆಯ ನಿರ್ದೇಶಕ ಡಾ. ಪಿ.ವಿ. ಭಂಡಾರಿಯವರು ವಹಿಸಲಿದ್ದಾರೆ. ಗೌರವ ಅತಿಥಿಗಳಾಗಿ ಆಟಿಸಂ ಸೊಸೈಟಿ ಆಫ್ ಉಡುಪಿ ಇದರ ಅಧ್ಯಕ್ಷ ಡಾ. ವಿರೂಪಾಕ್ಷ ದೇವರಮನೆ , ಒನ್ ಗುಡ್ ಸ್ಟೆಪ್ ಬೆಂಗಳೂರು ಸಂಸ್ಥಾಪಕಿ ಅಮಿತಾ ಪೈ, ಈಶಾನ್ಯ ಇಂಡಿಯಾ ಫೌಂಡೇಶನ್ ಬೆಂಗಳೂರು ಸ್ಥಾಪಕಿ ಸ್ವಾತಿ ವಲ್ಲಾಳ್ , ಪ್ರಕಾಶ್ ರೀಟೇಲ್ಸ್ ಪ್ರೈವೇಟ್ ಲಿಮಿಟೆಡ್ ನಿರ್ದೇಶಕ ಅಶೋಕ್ ಕುಮಾರ್, ಗಾಯತ್ರಿ ಎಕ್ಸ್‌ಫೋರ್ಟ್ಸ್ ಕಾರ್ಕಳ ಇದರ ಮ್ಯಾನೇಜಿಂಗ್ ಡೈರೆಕ್ಟರ್ ಬೋಳ ಶ್ರೀನಿವಾಸ ಕಾಮತ್ , ಗೀತಾನಂದ ಫೌಂಡೇಶನ್ ಮಣೂರು ಇದರ ಮ್ಯಾನೇಜಿಂಗ್ ಟ್ರಸ್ಟಿ ಆನಂದ ಸಿ. ಕುಂದರ್, ಕೋಟ ಸಂವೇದ ಪೋಷಕರ ಬೆಂಬಲ ಗುಂಪು ASU ಇದರ ಅಧ್ಯಕ್ಷ ವಿಠಲ್ ಭಕ್ತ ಭಾಗವಹಿಸಲಿದ್ದಾರೆ ಎಂದರು.
ಮಧ್ಯಾಹ್ನ 4 ಗಂಟೆಗೆ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಜಿಲ್ಲಾ ಅಂಗವಿಕಲ ಕಲ್ಯಾಣಾಧಿಕಾರಿ ರತ್ನ ಸುವರ್ಣ, ಬಡಗುಬೆಟ್ಟು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಜಯಕರ ಶೆಟ್ಟಿ ಇಂದ್ರಾಳಿ, ಡಾ. ಎ.ವಿ. ಬಾಳಿಗಾ ಸ್ಮಾರಕ ಆಸ್ಪತ್ರೆಯ ನಿರ್ದೇಶಕ ಡಾ. ಪಿ.ವಿ. ಭಂಡಾರಿ, ರೋಟರಿ ಜಿಲ್ಲೆ 3182 ರ ಮಾಜಿ ಜಿಲ್ಲಾ ಗವರ್ನರ್ ಡಾ. ಗೌರಿ, ಆಭರಣ ಜ್ಯುವೆಲ್ಲರ್ಸ್‌ನ ಮ್ಯಾನೇಜಿಂಗ್ ಡೈರೆಕ್ಟರ್ ಸುಭಾಷ್ ಕಾಮತ್, ಉಡುಪಿ ಆಟಿಸಂ ಸೊಸೈಟಿಯ ಕಾರ್ಯದರ್ಶಿ ರೂಪಾ ಮತ್ತು ಖಜಾಂಚಿ ಟೆಡ್ಡಿ ಅಂದ್ರೂ, ರಾಜ್ಯ ವಿಶೇಷ ಶಿಕ್ಷಕರ ಸಂಘದ ಅಧ್ಯಕ್ಷೆ ಕಾಂತಿ ಹರೀಶ್, ಜಿಲ್ಲಾ ವಿಶೇಷ ಶಿಕ್ಷಕರ ಸಂಘದ ಅಧ್ಯಕ್ಷ ರವೀಂದ್ರ ಭಾಗವಹಿಸಲಿದ್ದಾರೆ ಎಂದರು.
ಆಟಿಸಂ ಸೊಸೈಟಿ ಆಫ್ ಉಡುಪಿ ಜಿಲ್ಲೆಯಾದ್ಯಂತ ಆಟಿಸಂ ಮಕ್ಕಳ ಹಾಗೂ ಅವರ ಆರೈಕೆದಾರರ ಕಾಳಜಿಗಾಗಿ ಮೀಸಲಾಗಿರುವ ಏಕೈಕ ಸಂಸ್ಥೆಯಾಗಿದೆ. ಇತ್ತೀಚಿನ ದಿನಗಳಲ್ಲಿ ಆಟಿಸಂ ಮಕ್ಕಳ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬರುತ್ತಿದ್ದು, ಮಕ್ಕಳ ಬೆಳವಣಿಗೆಗೆ ಅಗತ್ಯವಿರುವ ಚಿಕಿತ್ಸೆಗಳ ಬಗ್ಗೆ ಅರಿವು ಮೂಡಿಸಲು, ಪೋಷಕರ ಮತ್ತು ಸಾರ್ವಜನಿಕರಲ್ಲಿ ಜಾಗೃತಿಯನ್ನು ಹೆಚ್ಚಿಸಲು ಈ ಸಂಸ್ಥೆ ನಿರಂತರವಾಗಿ ಪ್ರಯತ್ನಿಸುತ್ತಿದೆ ಎಂದರು.
ಆಟಿಸಂ ಸ್ಪೆಕ್ಟಮ್ ಡಿಸಾರ್ಡರ್ (ASD) ಮಕ್ಕಳ ಮೆದುಳಿನ ಬೆಳವಣಿಗೆಗೆ ಸಂಬಂಧಿಸಿದ ನರವೈಜ್ಞಾನಿಕ ವೈವಿಧ್ಯತೆಯನ್ನು ಹೊಂದಿದ್ದು, ಈ ಮಕ್ಕಳಲ್ಲಿ ಸಾಮಾಜಿಕ ಕೌಶಲ್ಯ, ಸಂವಹನ ಮತ್ತು ನಡವಳಿಕೆಗಳಲ್ಲಿ ಸಮಸ್ಯೆಗಳನ್ನು ಹೊಂದಿರುತ್ತದೆ. ಪ್ರತಿ ಮಗುವೂ ವಿಶಿಷ್ಟವಾಗಿದ್ದು, ಸೂಕ್ತ ತರಬೇತಿಯನ್ನು 2 ರಿಂದ 5 ವರ್ಷಗಳ ವಯಸ್ಸಿನಲ್ಲಿ ಆರಂಭಿಸಿದರೆ. ಈ ವಿಶೇಷ ಮಕ್ಕಳು ನಮ್ಮ ಸಮುದಾಯದಲ್ಲಿ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗುವಂತೆ ಪ್ರಯತ್ನಿಸಬಹುದು.
ಈ ನಿಟ್ಟಿನಲ್ಲಿ ಆಟಿಸಂ ಸೊಸೈಟಿ ಆಫ್ ಉಡುಪಿ ಪೋಷಕರು, ಶಿಕ್ಷಕರು, ದಾದಿಯರು ಮತ್ತು ವೈದ್ಯಕೀಯ ವೃತ್ತಿಪರರಲ್ಲಿ ಆಟಿಸಂ ಕುರಿತು ಜಾಗೃತಿಯನ್ನು ಮೂಡಿಸುವ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಪೋಷಕರಿಗೆ ಕೌಶಲ್ಯಗಳನ್ನು ವೃದ್ಧಿಸಲು ಬೆಂಬಲ ಗುಂಪುಗಳನ್ನು ರಚಿಸಿ ಆ ಮೂಲಕ ಮಾರ್ಗದರ್ಶನವನ್ನು ನೀಡಿ ಮಕ್ಕಳು ಮತ್ತು ಪೋಷಕರ ಸಮಸ್ಯೆಗಳಿಗೆ ಪರಿಹಾರವನ್ನು ಸೂಚಿಸಲು ಪ್ರಯತ್ನಿಸುತ್ತಿದೆ. ಉಡುಪಿಯಲ್ಲಿ ಸುಧಾರಿತ ಆಟಿಸಂ ಆರೈಕೆ ಕೇಂದ್ರವನ್ನು ಮುಂದಿನ ದಿನಗಳಲ್ಲಿ ಸ್ಥಾಪಿಸಿ ಮೂಲಭೂತ ಸೌಕರ್ಯಗಳನ್ನು ಒಳಗೊಂಡ ಉತ್ತಮ ಗುಣಮಟ್ಟದ ಆರೈಕೆಯನ್ನು ಆಟಿಸಂ ಇರುವ ಮಕ್ಕಳಿಗೆ ನೀಡುವುದು ನಮ್ಮ ಉದ್ದೇಶವಾಗಿದೆ ಎಂದರು.
ಸುದ್ದಿಗೋಷ್ಟಿಯಲ್ಲಿ ಆಟಿಸಂ ಸೊಸೈಟಿ ಆಫ್ ಉಡುಪಿ ಇದರ ಅಧ್ಯಕ್ಷ ಡಾ. ವಿರೂಪಾಕ್ಷ ದೇವರಮನೆ, ಕೋಟ ಸಂವೇದ ಪೋಷಕರ ಬೆಂಬಲ ಗುಂಪು ASU ಇದರ ಅಧ್ಯಕ್ಷ ವಿಠಲ್ ಭಕ್ತ, ಡಾ. ಎ.ವಿ ಬಾಳಿಗಾ ಸ್ಮಾರಕ ಆಸ್ಪತ್ರೆಯ ಆಡಳಿತಾಧಿಕಾರಿ ಸೌಜನ್ಯ ಶೆಟ್ಟಿ ಮತ್ತು ಆಟಿಸಂ ಆಟಿಸಂ ಸೊಸೈಟಿ ಆಫ್ ಉಡುಪಿ ಇದರ ಕೋ ಆರ್ಡಿನೇಟರ್ ಕೀರ್ತೇಶ್ ಉಪಸ್ಥಿತರಿದ್ದರು.