-->
 "ಸಮಾಧಾನ ಮಹೋತ್ಸವ" ಶಾಂತಯುತವಾಗಿ ನಡೆಯಲು ಜಿಲ್ಲಾಡಳಿತ ಕ್ರಮವಹಿಸಲಿ- ಫಣಿರಾಜ್

"ಸಮಾಧಾನ ಮಹೋತ್ಸವ" ಶಾಂತಯುತವಾಗಿ ನಡೆಯಲು ಜಿಲ್ಲಾಡಳಿತ ಕ್ರಮವಹಿಸಲಿ- ಫಣಿರಾಜ್


ಕ್ರೈಸ್ತ ಸಮುದಾಯದ ಧಾರ್ಮಿಕ ಕಾರ್ಯಕ್ರಮವಾದ "ಸಮಾಧಾನ ಮಹೋತ್ಸವ"ವನ್ನು ವಿರೋಧಿಸುತ್ತಿರುವ ಶ್ರೀಕಾಂತ್ ಶೆಟ್ಟಿ ಹಿಂಸಾತ್ಮಕ ವಾತಾವರಣ ಸೃಷ್ಟಿಸುವುದಾಗಿ ಬಹಿರಂಗವಾಗಿ ಜಿಲ್ಲಾಡಳಿತಕ್ಕೆ ಧಮಕಿ ಹಾಕಿದ್ದು, ಆತನ ವಿರುದ್ಧ ಕ್ರಮಕೈಗೊಳ್ಳುವಂತೆ ಸಹಭಾಳ್ವೆ ಸಂಘಟನೆಯ ಪ್ರಧಾನ ಸಂಚಾಲಕ ಫಣಿರಾಜ್ ಒತ್ತಾಯಿಸಿದ್ದಾರೆ. 

ಮಾರ್ಚ್ 20ರಿಂದ 22ರ ವರೆಗೆ ಕ್ರೈಸ್ತ ಸಮುದಾಯದ ಬಾಂಧವರು 'ಸಮಾಧಾನ' ಎಂಬ ತಮ್ಮ ವಾರ್ಷಿಕ ಧಾರ್ಮಿಕ ಕಾರ್ಯಕ್ರಮವನ್ನು ತಮ್ಮ ಸಂಸ್ಥೆಗಳಿಗೆ ಸೇರಿದ ಕ್ರಿಶ್ಚಿಯನ್ ಶಾಲೆ ಮೈದಾನದಲ್ಲಿ ತಮ್ಮ ಸಮಯದಾಯದ ಅನುಯಾಯಿಗಳಿಗಾಗಿ ಆಯೋಜಿಸಿದ್ದಾರೆ. ಭಾರತದ ಸಂವಿಧಾನವು ಆಯಾ ಧರ್ಮಗಳು ತಮ್ಮ ಧಾರ್ಮಿಕ ಆಚರಣೆಗಳನ್ನು ಮುಕ್ತವಾಗಿ ಆಚರಿಸಿಕೊಂಡು ಹೋಗುವ ಸ್ವಾತಂತ್ರ‍್ಯವನ್ನು ಹಕ್ಕಾಗಿ ನೀಡಿದೆ. ಅದರ ಪ್ರಕಾರ 'ಸಮಾಧಾನ' ಕಾರ್ಯಕ್ರಮವು, ಉಡುಪಿಯ ಬೇರೆ ಮತಗಳ ಧಾರ್ಮಿಕ ಕಾರ್ಯಕ್ರಮಗಳ ಹಾಗೆ ಸಹಜವಾಗಿ, ಶಾಂತಿಯುತವಾಗಿ ನಡೆದುಕೊಂಡು ಹೋಗ ಬೇಕಾದ್ದರಲ್ಲಿ ವಿಶೇಷತೆ ಏನೂ ಇರಬೇಕಾಗಿಲ್ಲ.

ಆದರೆ, ಸಂವಿಧಾನ ವಿರೋಧಿ ಧೋರಣೆಯನ್ನು ತನ್ನ ಪ್ರಣಾಳಿಕೆಯನ್ನಾಗಿಸಿಕೊಂಡಿರುವ, ಮತೀಯ ಅಲ್ಪಸಂಖ್ಯಾತರ ಧಾರ್ಮಿಕ ಸ್ವಾತಂತ್ರ‍್ಯವನ್ನು ಸಹಿಸದೇ, ಅವರ ಮತೀಯ ಆಚರಣೆಗಳನ್ನು ಅಪರಾಧೀಕರಣಗೊಳಿಸಲು ಸದಾ ಕಾರ್ಯವೆಸಗುತ್ತಿರುವ ಸಂಘ ಪರಿವಾರದ ಅಂಗ ಸಂಸ್ಥೆಯಾಗಿರುವ 'ಹಿಂದು ಜಾಗರಣ ವೇದಿಕೆ'ಯ ಮುಂದಾಳು ಶ್ರೀಕಾಂತ ಶೆಟ್ಟಿ ಎಂಬಾತನು, ಈ ಕಾರ್ಯಕ್ರಮ ನಡೆದರೆ ಹಿಂಸಾತ್ಮಕ ವಾತಾವರಣ ಸೃಷ್ಟಿಸುವುದಾಗಿ ಬಹಿರಂಗವಾಗಿ ಜಿಲ್ಲಾಡಳಿತಕ್ಕೆ ಧಮಕಿ ಹಾಕಿದ್ದಾನೆ. ಈ ಹಿಂದೆಯೂ ಈ ವ್ಯಕ್ತಿಯು ಇದೇ ಬಗೆಯ ದ್ವೇಷ ಹರಡುವ ಕಾನೂನು ಬಾಹಿರ ಕೃತ್ಯಗಳಿಗೆ ತೊಡಗಿದ್ದು, ಕಾನೂನುಕ್ರಮಕ್ಕೂ ಈಡಾಗಿದ್ದಾನೆ. 

ಈ ವ್ಯಕ್ತಿ ಹಾಗು ಆತನ ಸಂಘಟನೆಯ ಸಂವಿಧಾನ ಬಾಹಿರ ಅಪರಾಧ ಪ್ರಚೋದಕ ನಡೆಯನ್ನು ಜಿಲ್ಲಾ ಕಾನೂನು ಪಾಲಕರು ಹಾಗು ಜಿಲ್ಲಾಡಳಿತವು ಗಂಭೀರವಾಗಿ ಪರಿಗಣಿಸಿ, ಆತನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಮತ್ತು ಕ್ರೈಸ್ತ ಬಂಧುಗಳ ಧಾರ್ಮಿಕ ಕಾರ್ಯಕ್ರಮವು ಶಾಂತಿಯುತವಾಗಿ ನಡೆಯುವಂತೆ ತಮ್ಮ ಸಂವಿಧಾನ ಬದ್ಧ ಜವಾಬ್ದಾರಿಯನ್ನು ನಿಭಾಯಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ. 




Ads on article

Advertise in articles 1

advertising articles 2

Advertise under the article