"ಸಮಾಧಾನ ಮಹೋತ್ಸವ" ವಿರೋಧಿಸುವವರ ವಿರುದ್ಧ ಕ್ರಮವಾಗಲಿ- ಸಾಲಿಡಾರಿಟಿ ಆಗ್ರಹ
ವಿಶ್ವದ ಅತೀ ದೊಡ್ಡ ಪ್ರಜಾಪ್ರಭುತ್ವ ದೇಶವಾದ ಭಾರತದಲ್ಲಿ ಧಾರ್ಮಿಕ ಆಚರಣೆಗಳು ನಾಗರಿಕರ ಮೂಲಭೂತ ಹಕ್ಕಾಗಿದೆ. ಅದನ್ನು ನಿರ್ಬಂಧಿಸುವ, ತಡೆಯೊಡ್ಡುವ ಹಕ್ಕು ಯಾವ ದೊಣ್ಣೆ ನಾಯಕನಿಗೂ ಇಲ್ಲ. ಇಂತಹ ಸಂದರ್ಭದಲ್ಲಿ ಕ್ರೈಸ್ತ ಸಮುದಾಯ ಉಡುಪಿಯಲ್ಲಿ ಹಮ್ಮಿಕೊಂಡಿರುವ ಸಮಾಧಾನ ಮಹೋತ್ಸಕ್ಕೆ ಹಿಂದೂ ಜಾಗರಣ ವೇದಿಕೆಯ ಕೆಲವು ಮಂದಿ ಅಪಸ್ವರ ಎತ್ತಿ ವಿರೋಧ ವ್ಯಕ್ತಪಡಿಸುತ್ತಿರುವುದು ಸಂವಿಧಾನ ಬಾಹಿರ ನಡೆಯಾಗಿದೆ. ಶಾಂತಿ-ಸೌಹರ್ದತೆ ಕದಡಲು ಪ್ರಯತ್ನಿಸುವ ಇಂತಹವರ ವಿರುದ್ಧ ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಾಲಿಡಾರಿಟಿ ಯೂತ್'ಮೂವ್ಮೆಂಟ್ ಉಡುಪಿ ಜಿಲ್ಲೆ ಆಗ್ರಹಿಸಿದೆ.
ಕ್ರೈಸ್ತ ಬಾಂಧವರಿಗೆ ಈಗ ಪವಿತ್ರ ಕ್ರಿಸ್ತನ ಶಿಲುಬೆಯ ಶ್ರಮದಿನದ ಧ್ಯಾನ ಕಾಲ ನಡೆಯುತ್ತಿದ್ದು ಪ್ರತಿವರ್ಷವೂ ಈ ಸಂದರ್ಭದಲ್ಲಿ ಸಮಾಧಾನ ಮಹೋತ್ಸವವನ್ನು ಆಯೋಜಿಸಲಾಗುತ್ತಿದ್ದು ಇದನ್ನು ವಿರೋಧಿಸಿ ಸಮಾಜದಲ್ಲಿ ಶಾಂತಿ ಕದಡುವ ಪ್ರಯತ್ನ ನಡೆಸುವುದು ಸರಿಯಲ್ಲ. ಈ ದೇಶದಲ್ಲಿ ಎಲ್ಲರಿಗೂ ಸಮಾನವಾಗಿ ತಮ್ಮ ಧಾರ್ಮಿಕ ನಂಬಿಕೆಗಳನ್ನು ಆಚರಿಸುವ ಅವಕಾಶವಿದೆ. ಅದಕ್ಕೆ ತಡೆಯೊಡ್ಡುವ ಅಧಿಕಾರ ಯಾರಿಗೂ ಇಲ್ಲ.
ಸಮಾಧಾನ ಮಹೋತ್ಸವ ಕ್ರೈಸ್ತರ ಆಧ್ಯಾತ್ಮಿಕ ಕಾರ್ಯಕ್ರಮವಾಗಿದ್ದು ಇದನ್ನು ನಡೆಸದಂತೆ ವಿರೋಧ ವ್ಯಕ್ತಪಡಿಸುವ ಯಾವುದೇ ರೀತಿಯ ಹಕ್ಕು ಹಿಂದೂ ಜಾಗರಣ ವೇದಿಕೆಗಿಲ್ಲ. ಧಾರ್ಮಿಕ ಅಶಾಂತಿ ಮೂಡಿಸುವ ಕೆಲಸವನ್ನು ಹಿಂಜಾವೇ ಶ್ರೀಕಾಂತ್ ಶೆಟ್ಟಿಯಂತಹ ಮುಖಂಡರು ಮಾಡ ಹೊರಟಿದ್ದಾರೆ. ಇವರ ವಿರುದ್ಧ ಈ ಮೊದಲು ಕೂಡ ಪ್ರಚೋದನಕಾರಿ ಭಾಷಣ ಮಾಡಿದ ಆರೋಪವಿದೆ. ಉಡುಪಿ ಶಾಂತಿ ಪ್ರಿಯ ನಾಗರಿಕರ ಜಿಲ್ಲೆ. ಇಲ್ಲಿ ಸುಖಾ-ಸುಮ್ಮನೆ ಧಾರ್ಮಿಕ ಅಲ್ಪಸಂಖ್ಯಾತರ ಧಾರ್ಮಿಕ ಆಚರಣೆಗಳ ಕುರಿತು ಇಲ್ಲದ ಸಲ್ಲದ ಹೇಳಿಕೆಗಳನ್ನು ನೀಡಿ ಪ್ರಚೋದಿಸುವುದು ಅಕ್ಷಮ್ಯ. ಇಂತಹ ವ್ಯಕ್ತಿಗಳ ವಿರುದ್ದ ಪೊಲೀಸ್ ಇಲಾಖೆ ಸೂಕ್ತ ಕ್ರಮ ವಹಿಸುವಂತೆ ಹಾಗೂ ಸಮಾಧಾನ ಮಹೋತ್ಸವಕ್ಕೆ ಸೂಕ್ತ ಭದ್ರತೆ ಒದಗಿಸಿ ಸಂವಿಧಾನದ ಆಶಯವನ್ನು ಎತ್ತಿ ಹಿಡಿಯಬೇಕೆಂದು ಸಾಲಿಡಾರಿಟಿ ಉಡುಪಿ ಜಿಲ್ಲೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.