ಕರಾವಳಿಗೆ ಭ್ರಷ್ಟಾಚಾರ ಪರಿಚಯಿಸಿದವರೇ ಕಾರ್ಕಳ ಶಾಸಕ ಸುನಿಲ್ ಕುಮಾರ್: ಮುನಿಯಾಲು ಉದಯಕುಮಾರ್ ಆರೋಪ
ಕಳೆದ 20 ವರ್ಷಗಳ ಹಿಂದೆ ಕರಾವಳಿಯಲ್ಲಿ ಭ್ರಷ್ಟಾಚಾರವನ್ನು ಪರಿಚಯಿಸಿದವರೇ ಕಾರ್ಕಳ ಶಾಸಕ ಸುನಿಲ್ ಕುಮಾರ್ ಅವರು ಎಂದು ಕಾಂಗ್ರೆಸ್ ಮುಖಂಡ ಮುನಿಯಾಲು ಉದಯಕುಮಾರ್ ಶೆಟ್ಟಿ ಆರೋಪಿಸಿದರು.
ಉಡುಪಿಯಲ್ಲಿ ಅವರು ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.
ಶಾಸಕ ಸುನಿಲ್ ಕುಮಾರ್ ಅವರು, ಧರ್ಮ ಹಾಗು ದೇವರ ಹೆಸರಿನಲ್ಲಿ ವೋಟ್ ಕೇಳುತ್ತಿದ್ದಾರೆ ಹೊರತು ಅಭಿವೃದ್ದಿ ಮಾಡುತ್ತಿಲ್ಲ. ಕೇವಲ ರಾಜ್ಯಸರ್ಕಾರದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಸುನಿಲ್ ಕುಮಾರ್ ಅವರ ಬೆಂಬಲಿಗನೇ ಕಾರ್ಕಳದ ಮುಂಡ್ಲಿ ಅಣೆಕಟ್ಟಿನ ಗೇಟ್ ಕಳ್ಳತನ ಮಾಡಿ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾನೆ . ಆದರೆ ಈ ವಿಚಾರ ಎಲ್ಲೂ ಬಹಿರಂಗವಾಗದಂತೆ ನೋಡಿಕೊಳ್ಳಲಾಗಿದೆ. ಮುಂಡ್ಲಿ ಅಣೆಕಟ್ಟಿನ ಗೇಟ್ ನ ಉಪಕರಣಗಳು ಕಳ್ಳತನವಾಗಿರುವ ಬಗ್ಗೆ ಉನ್ನತ ಮಟ್ಟದ ತನಿಖೆಯಾಗಬೇಕೆಂದು ಒತ್ತಾಯಿಸಿದರು.
ರಸ್ತೆ ಸೇತುವೆ ಸೇರಿದಂತೆ ಕಾರ್ಕಳ ಕ್ಷೇತ್ರದ ಅಭಿವೃದ್ದಿಗೆ ಈಗಾಗಲೇ ರಾಜ್ಯಸರ್ಕಾರದಿಂದ ೧೧೦ ಕೋಟಿ ರೂಪಾಯಿ ಅನುದಾನ ಬಿಡುಗಡೆಯಾಗಿದೆ. ಆದರೆ ಸುನಿಲ್ ಕುಮಾರ್ ಅವರು ಅಭಿವೃದ್ಧಿ ಕೆಲಸದಲ್ಲಿ ರಾಜ್ಯಸರ್ಕಾರದ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋಪಿನಾಥ್ ಭಟ್, ಕಾರ್ಕಳ ಹೆಬ್ರಿ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಭಾನುಬಾಸ್ಕರ್, ಪ್ರಸನ್ನ ಶೆಟ್ಟಿ, ದಿನೇಶ್ ಶೆಟ್ಟಿ ಉಪಸ್ಥಿತರಿದ್ದರು.