LPG ಕೊರತೆ ಸರಿದೂಗಿಸಲು ಕೇಂದ್ರದಿಂದ ಹೊಸ ಕ್ರಮ; ಸೀಮೆ ಎಣ್ಣೆ ವಿತರಿಸಲು ನಿರ್ಧಾರ
ಮಧ್ಯಪ್ರಾಚ್ಯದಲ್ಲಿನ ಉದ್ವಿಗ್ನತೆ ಮತ್ತು ಇಂಧನ ಪೂರೈಕೆಯಲ್ಲಿನ ವ್ಯತ್ಯಯದಿಂದಾಗಿ ದೇಶದ ನಾಗರಿಕರ ಅಗತ್ಯತೆಗಳನ್ನು ಪೂರೈಸಲು ಕೇಂದ್ರ ಸರ್ಕಾರವು ಮಹತ್ವದ ನಿರ್ಧಾರ ಕೈಗೊಂಡಿದೆ. ಈ ಹಿಂದೆ "ಸೀಮೆಎಣ್ಣೆ ಮುಕ್ತ" ಎಂದು ಘೋಷಿಸಲಾಗಿದ್ದ ದೆಹಲಿ, ಹರಿಯಾಣ, ಉತ್ತರ ಪ್ರದೇಶ ಮತ್ತು ಗುಜರಾತ್ ಸೇರಿದಂತೆ 21 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಸೀಮೆಎಣ್ಣೆ ವಿತರಣೆಯನ್ನು ತಾತ್ಕಾಲಿಕವಾಗಿ ಮತ್ತೆ ಆರಂಭಿಸಲಾಗಿದೆ.ಈ ತುರ್ತು ಕ್ರಮವು ಮುಂದಿನ 60 ದಿನಗಳವರೆಗೆ ಅಥವಾ ಮುಂದಿನ ಆದೇಶದವರೆಗೆ ಜಾರಿಯಲ್ಲಿರುತ್ತದೆ.
ಸೀಮೆಎಣ್ಣೆಯನ್ನು ತ್ವರಿತವಾಗಿ ತಲುಪಿಸಲು ಆಯ್ದ ಪೆಟ್ರೋಲ್ ಬಂಕ್‌ಗಳಿಗೆ ಅನುಮತಿ ನೀಡಲಾಗಿದೆ. ಪ್ರತಿಯೊಂದು ಜಿಲ್ಲೆಯಲ್ಲಿ ಗರಿಷ್ಠ ಎರಡು ಪೆಟ್ರೋಲ್ ಬಂಕ್‌ಗಳನ್ನು ಇದಕ್ಕಾಗಿ ಗುರುತಿಸಬಹುದು. ಈ ನಿಯಮ ಸಡಿಲಿಕೆಯ ಅಡಿಯಲ್ಲಿ, ಇಂತಹ ಬಂಕ್‌ಗಳು ತಲಾ 5,000 ಲೀಟರ್‌ಗಳವರೆಗೆ ಸೀಮೆಎಣ್ಣೆಯನ್ನು ಸಂಗ್ರಹಿಸಿ ವಿತರಿಸಲು ಅವಕಾಶ ಕಲ್ಪಿಸಲಾಗಿದೆ.
ಎಲ್‌ಪಿಜಿ ಪೂರೈಕೆಯಲ್ಲಿ ಉಂಟಾಗಬಹುದಾದ ಒತ್ತಡವನ್ನು ಕಡಿಮೆ ಮಾಡುವುದು ಮತ್ತು ಬಡ ಕುಟುಂಬಗಳಿಗೆ ಅಡುಗೆ ಹಾಗೂ ಬೆಳಕಿನ ವ್ಯವಸ್ಥೆಗೆ ಪರ್ಯಾಯ ಇಂಧನ ಒದಗಿಸುವುದು ಇದರ ಮುಖ್ಯ ಗುರಿಯಾಗಿದೆ. ಪೆಟ್ರೋಲ್ ಬಂಕ್‌ಗಳಲ್ಲಿ ಸೀಮೆಎಣ್ಣೆ ಸಂಗ್ರಹಣೆಗೆ ಪೆಟ್ರೋಲಿಯಂ ಸುರಕ್ಷತಾ ನಿಯಮಗಳಲ್ಲಿ ಸಡಿಲಿಕೆ ನೀಡಲಾಗಿದ್ದರೂ, ಬೆಂಕಿ ಅವಘಡ ಅಥವಾ ಕಲಬೆರಕೆ ತಡೆಯಲು ಕಟ್ಟುನಿಟ್ಟಿನ ನಿಗಾ ವಹಿಸುವಂತೆ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ಸೂಚಿಸಿದೆ. ಸಾಂಪ್ರದಾಯಿಕ ಪಡಿತರ ಅಂಗಡಿಗಳ ಜೊತೆಗೆ ಈ ಬಂಕ್‌ಗಳು ಪೂರಕವಾಗಿ ಕಾರ್ಯನಿರ್ವಹಿಸಲಿವೆ ಎಂದು ಆದೇಶದಲ್ಲಿ ತಿಳಿಸಿದೆ.
ಮಾರ್ಚ್ 29ರಂದು ಹೊರಡಿಸಲಾದ ಈ ಆದೇಶದ ಪ್ರಕಾರ, ದೇಶದ ಮನೆಬಳಕೆಯ ಅಡುಗೆ ಮತ್ತು ಬೆಳಕಿನ ಅಗತ್ಯತೆಗಳನ್ನು ಪೂರೈಸಲು ಸಾರ್ವಜನಿಕ ವಿತರಣಾ ವ್ಯವಸ್ಥೆಯ ಅಡಿಯಲ್ಲಿ ಸುಪೀರಿಯರ್ ಸೀಮೆಎಣ್ಣೆಯನ್ನು ವಿತರಿಸಲು ಸರ್ಕಾರ ನಿರ್ಧರಿಸಿದೆ. ಈ ಹಿಂದೆ ಸೀಮೆಎಣ್ಣೆ ಮುಕ್ತ ಎಂದು ಘೋಷಿಸಲಾಗಿದ್ದ 21 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೂ ಈಗ ತಾತ್ಕಾಲಿಕವಾಗಿ ಸೀಮೆಎಣ್ಣೆ ಹಂಚಿಕೆ ಮಾಡಲಾಗುತ್ತಿದೆ.