ಮೀನುಗಾರಿಕೆಗೂ ತಟ್ಟಿದ ತೈಲ ಕೊರತೆ; ಮಲ್ಪೆಯಲ್ಲಿ ಲಂಗರು ಹಾಕಿದ ಬೋಟುಗಳು(Video)
ಮಧ್ಯಪ್ರಾಚ್ಯದ ದೇಶಗಳಲ್ಲಿ ಭುಗಿಲೆದ್ದಿರುವ ಯುದ್ಧದ ಪರಿಣಾಮಗಳು ಜಾಗತಿಕ ಮಟ್ಟದಲ್ಲಿ ಅನೇಕ ಕ್ಷೇತ್ರಗಳಿಗೆ ಹೊಡೆತ ನೀಡುತ್ತಿದ್ದು, ಅದರ ತೀವ್ರತೆ ಈಗ ಕರಾವಳಿ ಕರ್ನಾಟಕದ ಮೀನುಗಾರಿಕಾ ವಲಯದಲ್ಲಿಯೂ ಸ್ಪಷ್ಟವಾಗಿ ಕಾಣಿಸುತ್ತಿದೆ. ಯುದ್ಧದಿಂದಾಗಿ ಕಚ್ಚಾತೈಲ ಪೂರೈಕೆಯಲ್ಲಿ ಉಂಟಾದ ವ್ಯತ್ಯಯವು ಡೀಸೆಲ್ ಲಭ್ಯತೆಯನ್ನು ಹಿನ್ನಡೆಯಾಗಿಸಿದ್ದು, ಆಳ ಸಮುದ್ರ ಮೀನುಗಾರಿಕೆಗೆ ಅವಲಂಬಿತವಾಗಿರುವ ಯಾಂತ್ರೀಕೃತ ಬೋಟ್‌ಗಳ ಕಾರ್ಯಾಚರಣೆಯೇ ಸ್ಥಗಿತಗೊಂಡಿದೆ.
ಉಡುಪಿ ಜಿಲ್ಲೆಯ ಪ್ರಮುಖ ಮೀನುಗಾರಿಕಾ ಕೇಂದ್ರವಾದ ಮಲ್ಪೆ ಬಂದರಿನಲ್ಲಿ ಈ ಸಮಸ್ಯೆಯ ತೀವ್ರತೆ ಹೆಚ್ಚು ಗೋಚರಿಸುತ್ತಿದೆ. ಸಾಮಾನ್ಯವಾಗಿ ದಿನನಿತ್ಯ ಸಾಗರದ ಅಲೆಗಳನ್ನು ಚಾಚಿ ಮೀನುಗಾರಿಕೆಗೆ ತೆರಳುವ ನೂರಾರು ಬೋಟ್‌ಗಳು ಈಗ ಬಂದರಿನಲ್ಲೇ ಲಂಗರು ಹಾಕಿ ನಿಶ್ಚಲವಾಗಿ ನಿಂತಿವೆ. ಡೀಸೆಲ್ ಕೊರತೆಯಿಂದಾಗಿ ಸಮುದ್ರಕ್ಕೆ ಹೊರಡುವ ಸಾಧ್ಯತೆ ಇಲ್ಲದಿದ್ದರಿಂದ ಮೀನುಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಆಳ ಸಮುದ್ರ ಮೀನುಗಾರಿಕೆ ನಡೆಸುವವರಿಗೆ 10 ಅಥವಾ 11 ದಿನಗಳ ಒಂದು ಟ್ರಿಪ್‌ಗೆ 5,500 ಲೀ. ನಿಂದ 6,000 ಲೀ. ಡೀಸೆಲ್ ಬೇಕು. ತಿಂಗಳಿಗೆ ಸರಾಸರಿ 18,000 ಲೀ. ಡೀಸೆಲ್ ಅಗತ್ಯ ಮೀನುಗಾರರಿಗೆ ಸಬ್ಸಿಡಿ ದರದಲ್ಲಿ 10 ತಿಂಗಳಿಗೆ 90,000 ಲೀ. ಡೀಸೆಲ್ ದೊರಕಿದರೆ, ಹೆಚ್ಚುವರಿ 9,000 ಲೀ. ಡೀಸೆಲ್ ಬೇಕು. ಪ್ರಸ್ತುತ ಇಂಧನ ಕೊರತೆ ಪರಿಣಾಮದಿಂದಾಗಿ 15 ದಿನಗಳಿಂದ ಮೀನುಗಾರರನ್ನು ಬಾಧಿಸಲಾರಂಭಿಸಿದೆ.
ಇಂಧನ ಕೊರತೆ ನಿಭಾಯಿಸಲು ಸದ್ಯ ಮೀನುಗಾರಿಕೆ ಇಲಾಖೆಯಿಂದ ಸರತಿ ಮಾದರಿಯಲ್ಲಿ ಲಭ್ಯವಿರುವ ಡೀಸೆಲ್ ಹಂಚಿಕೆ ಮಾಡಲಾಗುತ್ತಿದೆ. ಬಂದರು ಆವರಣದಲ್ಲಿರುವ ಪೆಟ್ರೋಲ್ ಬಂಕ್‌ಗಳಿAದ ಡೀಸೆಲ್ ವಿತರಿಸಲಾಗುತ್ತಿತ್ತು. ಉಡುಪಿಯಲ್ಲಿ 6 ಕನ್ಸೂಮರ್ ಹಾಗೂ 4 ರಿಟೈಲರ್ ಬಂಕ್ ಗಳಿವೆ. ಹೊರಗಿನ ಖಾಸಗಿ ಪೆಟ್ರೋಲ್ ಬಂಕ್‌ಗಳಲ್ಲೂ 500 ಲೀ.ಗಿಂತ ಹೆಚ್ಚಿನ ಡೀಸೆಲ್ ನೀಡುತ್ತಿಲ್ಲ. ಹೀಗಾಗಿ ಉಡುಪಿ ವ್ಯಾಪ್ತಿಯಲ್ಲಿ 150ಕ್ಕೂ ಹೆಚ್ಚು ಬೋಟ್‌ಗಳು ಸಮುದ್ರಕ್ಕೆ ತೆರಳದೆ ನಿಂತಿವೆ.
ಈ ಪರಿಸ್ಥಿತಿಯಿಂದ ಮೀನುಗಾರರ ಆರ್ಥಿಕ ಸ್ಥಿತಿ ಗಂಭೀರವಾಗಿ ಬಾಧಿತವಾಗಿದೆ. ದಿನಗೂಲಿ ಆಧಾರಿತ ಕಾರ್ಮಿಕರು, ಬೋಟ್ ಮಾಲೀಕರು ಹಾಗೂ ಮೀನು ವ್ಯಾಪಾರಿಗಳ ಜೀವನೋಪಾಯದ ಮೇಲೆ ನೇರ ಪರಿಣಾಮ ಬಿದ್ದಿದೆ. ಮೀನುಗಾರಿಕೆ ನಿಲ್ಲುವುದರಿಂದ ಮಾರುಕಟ್ಟೆಗೆ ಮೀನು ಸರಬರಾಜು ಕಡಿಮೆಯಾಗಿದ್ದು, ಬೆಲೆ ಏರಿಕೆಯ ಆತಂಕವೂ ಮೂಡಿದೆ.
ಸ್ಥಳೀಯ ಮೀನುಗಾರರು ಮತ್ತು ಸಂಘಟನೆಗಳು ತಕ್ಷಣ ಡೀಸೆಲ್ ಪೂರೈಕೆಯನ್ನು ಸುಧಾರಿಸಲು ಸರ್ಕಾರದ ಮಧ್ಯಸ್ಥಿಕೆಯನ್ನು ಆಗ್ರಹಿಸುತ್ತಿವೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಕರಾವಳಿ ಆರ್ಥಿಕತೆಗೆ ದೊಡ್ಡ ಹೊಡೆತ ಬೀಳುವ ಸಾಧ್ಯತೆಯಿದೆ ಎಂಬ ಆತಂಕ ವ್ಯಕ್ತವಾಗುತ್ತಿದೆ.
ಒಟ್ಟಿನಲ್ಲಿ, ದೂರದ ಮಧ್ಯಪ್ರಾಚ್ಯದ ಯುದ್ಧವು ಸ್ಥಳೀಯ ಮೀನುಗಾರರ ಬದುಕಿನ ಮೇಲೆ ಎಷ್ಟು ಆಳವಾದ ಪ್ರಭಾವ ಬೀರುತ್ತದೆ ಎಂಬುದಕ್ಕೆ ಮಲ್ಪೆ ಬಂದರಿನಲ್ಲಿ ಲಂಗರು ಹಾಕಿದ ಬೋಟುಗಳೇ ಸ್ಪಷ್ಟ ಸಾಕ್ಷಿಯಾಗಿದೆ.