20 ಅಡಿ ಆಳದ ಬಾವಿಗೆ ಬಿದ್ದ ವೃದ್ಧ ಪವಾಡ ಸದೃಶ ಪಾರು
ಆಕಸ್ಮಿಕವಾಗಿ ಬಾವಿಗೆ ಬಿದ್ದು ಹೊರಜಗತ್ತಿನ ಸಂಪರ್ಕವಿಲ್ಲದೆ ಸತತ ಮೂರು ದಿನಗಳ ಕಾಲ ಸಾವು-ಬದುಕಿನ ನಡುವೆ ಹೋರಾಟ ನಡೆಸಿದ 62 ವರ್ಷದ ವ್ಯಕ್ತಿಯೊಬ್ಬರು ಪವಾಡ ಸದೃಶವಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಆದಿ ಉಡುಪಿಯ ಕಂಬಳಕಟ್ಟೆಯ ನಿವಾಸಿ ಶ್ರೀನಿವಾಸ ಆಚಾರ್ಯ ಅವರು ಬದುಕಿ ಬಂದ ವೃದ್ಧ . ಒಬ್ಬಂಟಿಯಾಗಿರುವ ಶ್ರೀನಿವಾಸ ಆಚಾರ್ಯರಿಗೆ ಕಳೆದ ಎರಡು ತಿಂಗಳ ಹಿಂದೆ ಆರೋಗ್ಯ ಸಮಸ್ಯೆ ಕಾಡಿದ್ದು, ಬಳಿಕ ಗುಣಮುಖ ಹೊಂದಿದ್ದರು. ತನ್ನ ಮನೆ ಮುಂದಿನ 10 ಅಡಿ ಅಗಲ ಹಾಗೂ 20 ಅಡಿ ಆಳದ ಬಾವಿಗೆ ಕಸ ಬಿದ್ದು ಪಂಪ್ ಮೂಲಕ ನೀರು ಸರಿಯಾಗಿ ಬಾರದ ಕಾರಣ ಕಳೆದ ಶನಿವಾರ ಸಂಜೆ ಶ್ರೀನಿವಾಸ ಅವರು ತಮ್ಮ ಮನೆಯ ಮುಂದಿನ 20 ಅಡಿ ಆಳದ ಬಾವಿಯಿಂದ ಪಂಪ್‌ನ ಫುಟ್‌ಬಾಲ್ ಪೈಪ್ ಎಳೆಯಲು ಪ್ರಯತ್ನಿಸುತ್ತಿದ್ದರು. ಈ ವೇಳೆ ಹಗ್ಗ ತುಂಡಾದ ಪರಿಣಾಮ ಆಯತಪ್ಪಿ ಬಾವಿಯೊಳಗೆ ಬಿದ್ದಿದ್ದಾರೆ. ಒಬ್ಬಂಟಿಯಾಗಿ ವಾಸವಿದ್ದ ಅವರ ಕಿರುಚಾಟ ಯಾರಿಗೂ ಕೇಳಿಸಲಿಲ್ಲ. ನೀರಿನಲ್ಲಿ ಮುಳುಗುತ್ತಿದ್ದ ಅವರಿಗೆ ಅದೃಷ್ಟವಶಾತ್ ಪಂಪ್‌ನ ಪೈಪ್ ಹಾಗೂ ಹಗ್ಗ ಸಿಕ್ಕಿದ್ದು, ಅದನ್ನು ಬಿಗಿಯಾಗಿ ಹಿಡಿದುಕೊಂಡೇ ಮೂರು ದಿನಗಳ ಕಾಲ ನೀರಿನಲ್ಲೇ ನಿಂತಿದ್ದರು.
ಶ್ರೀನಿವಾಸ ಆಚಾರ್ಯರು ಬದುಕಿ ಬರಲು ಅವರ ಪರಿಚಯಸ್ಥ ಗಣೇಶ್ ಎಂಬುವವರ ಸಮಯಪ್ರಜ್ಞೆ ಕಾರಣವಾಯಿತು. ಶ್ರೀನಿವಾಸ ಅವರಿಗೆ ನೀಡಿದ್ದ ಗ್ಯಾಸ್ ಸಿಲಿಂಡರ್ ಮರಳಿ ಪಡೆಯಲು ಗಣೇಶ್ ಕರೆ ಮಾಡಿದಾಗ ಫೋನ್ ಸ್ವೀಕರಿಸಿರಲಿಲ್ಲ. ಗ್ಯಾಸ್ ಏಜೆನ್ಸಿಯವರು ಮನೆಗೆ ಹೋದಾಗಲೂ ಅವರು ಸಿಕ್ಕಿರಲಿಲ್ಲ. ಇದರಿಂದ ಸಂಶಯಗೊಂಡ ಗಣೇಶ್ ಅವರು ಸ್ಥಳೀಯರಿಗೆ ಪರಿಶೀಲಿಸಲು ತಿಳಿಸಿದರು. ಬಾಡಿಗೆ ಮನೆಯವರು ಹುಡುಕಾಡಿದಾಗ ಬಾವಿಯೊಳಗೆ ನಿತ್ರಾಣಗೊಂಡ ಸ್ಥಿತಿಯಲ್ಲಿ ಆಚಾರ್ಯರು ಪತ್ತೆಯಾದರು. ಮೂರು ದಿನಗಳಿಂದ ಆಹಾರವಿಲ್ಲದೆ ಅತ್ಯಂತ ನಿತ್ರಾಣಗೊಂಡಿದ್ದ ಆಚಾರ್ಯರಿಗೆ ಸ್ವತಃ ಮೇಲಕ್ಕೆ ಬರಲು ಸಾಧ್ಯವಾಗಲಿಲ್ಲ. ತಕ್ಷಣ ಸ್ಥಳಕ್ಕೆ ಧಾವಿಸಿದ ಲೀಡಿಂಗ್ ಫೈರ್‌ಫೈಟರ್‌ಗಳಾದ ಸತೀಶ್, ಅಶ್ವಿನ್ ಸನಿಲ್, ಚಾಲಕ ಭರತ್ ಹಾಗೂ ತಂಡದವರು ಬಾವಿಯೊಳಗೆ ಇಳಿದು ಅವರನ್ನು ಸುರಕ್ಷಿತವಾಗಿ ಮೇಲೆತ್ತಿದರು.
ತಕ್ಷಣವೇ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದ್ದು, ಇದೀಗ ಅವರು ಚೇತರಿಸಿಕೊಂಡಿದ್ದಾರೆ.