ಮನೆ ಕಳ್ಳತನ ಪ್ರಕರಣ: 24 ಗಂಟೆಯೊಳಗೆ ಆರೋಪಿಗಳ ಬಂಧನ
ಕಾರ್ಕಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಮನೆ ಕಳ್ಳತನ ಪ್ರಕರಣವನ್ನು ಕೇವಲ 24 ಗಂಟೆಯೊಳಗೆ ಪೊಲೀಸರು ಭೇದಿಸಿ ಆರೋಪಿಗಳನ್ನು ಬಂಧಿಸಿದ್ದಾರೆ .
ಆನಂದ ಕುಲಾಲ್ (40), ಜಯರಾಮ ಆಚಾರ್ಯ (54) ಬಂಧಿತರು.
ಎಪ್ರಿಲ್ 23ರಂದು ಬೆಳಿಗ್ಗೆ 9.10 ಗಂಟೆಯಿಂದ 24 ರ ಸಂಜೆ 6 ಗಂಟೆಯ ನಡುವಿನ ಅವಧಿಯಲ್ಲಿ, ಕಳ್ಳರು ಮನೆಯ ಬಾಗಿಲನ್ನು ಮೀಟಿ ಒಳನುಗ್ಗಿ ಕಪಾಟಿನಲ್ಲಿದ್ದ ಚಿನ್ನಾಭರಣಗಳನ್ನು ಕಳವು ಮಾಡಿಕೊಂಡು ಹೋಗಿದ್ದರು. ಕಳವಾದ ವಸ್ತುಗಳಲ್ಲಿ ಸುಮಾರು 24 ಗ್ರಾಂ ತೂಕದ ಚಿನ್ನದ ನೆಕ್ಲೆಸ್, 3 ಗ್ರಾಂ ತೂಕದ ಮೂರು ಉಂಗುರಗಳು, 3 ಗ್ರಾಂ ತೂಕದ ಬೆಂಡೋಲೆ ಹಾಗೂ 3 ಗ್ರಾಂ ತೂಕದ ಜುಮ್ಕಿ ಸೇರಿದ್ದು, ಒಟ್ಟು ಮೌಲ್ಯ ರೂ.2.64 ಲಕ್ಷ ಎಂದು ಅಂದಾಜಿಸಲಾಗಿದೆ.
ಈ ಕುರಿತು ಶಂಕರ ಕುಲಾಲ್ ಅವರು ನೀಡಿದ ದೂರಿನ ಮೇರೆಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿ ಕಾರ್ಯಾಚರಣೆ ನಡೆಸಿದ ಪೊಲೀಸ್ ಆರೋಪಿಯನ್ನು ಬಂಧಿಸಿದ್ದಾರೆ. ಕಳವು ಮಾಡಿದ ಚಿನ್ನವನ್ನು ಖರೀದಿಸಿದ್ದ ಜಯರಾಮ ಆಚಾರ್ಯ ಅವರನ್ನು ಸಹ ಬಂಧಿಸಲಾಗಿದೆ. ಆರೋಪಿಗಳಿಂದ ಸುಮಾರು 39 ಗ್ರಾಂ ತೂಕದ, ಅಂದಾಜು ರೂ.5.60 ಲಕ್ಷ ಮೌಲ್ಯದ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಮುಂದಿನ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.