ಉಪ್ಪೂರು ನಾಗರಜಿಡ್ಡ ಪ್ರದೇಶದಲ್ಲಿ ನದಿ ಕೊರೆತ: ಸ್ಥಳೀಯರಲ್ಲಿ ಆತಂಕ
Thursday, April 23, 2026
ಬ್ರಹ್ಮಾವರ ತಾಲೂಕಿನ ಉಪ್ಪೂರು ಗ್ರಾಮದ ನಾಗರಜಿಡ್ಡ ಪ್ರದೇಶದಲ್ಲಿ ಸ್ವರ್ಣ ನದಿ ಸಮುದ್ರ ಸೇರುವ ಸುಮಾರು 8 ಕಿಮೀ ದೂರದಲ್ಲಿ ಉಪ್ಪು ನೀರಿನ ತಡೆಗಾಗಿ ನಿರ್ಮಿಸಲುದ್ದೇಶಿಸಿದ ಡ್ಯಾಮ್ ಈಗ ಸ್ಥಳೀಯರಿಗೆ ಸಮಸ್ಯೆ ತಂದೊಡ್ಡಿದೆ. ಹೀಗಾಗಿ ಈ ಭಾಗದ ಸುಮಾರು 50–60 ಮನೆಗಳ ನಿವಾಸಿಗಳು ತೀವ್ರ ಆತಂಕದಲ್ಲಿದ್ದಾರೆ.
ಸ್ವರ್ಣ ನದಿ ಸಮುದ್ರ ಸೇರುವ ಸುಮಾರು 8 ಕಿಮೀ ದೂರದಲ್ಲಿ ಉಪ್ಪು ನೀರಿನ ತಡೆಗಾಗಿ ಡ್ಯಾಮ್ ನಿರ್ಮಾಣ ಕಾರ್ಯ ಪ್ರಾರಂಭಿಸಲಾಗಿತ್ತು. ಆದರೆ, ಸ್ಥಳೀಯರ ಅಭಿಪ್ರಾಯ ಸಂಗ್ರಹಿಸದೆ ಆರಂಭವಾದ ಈ ಯೋಜನೆ ಮಧ್ಯದಲ್ಲೇ ಸ್ಥಗಿತಗೊಂಡಿದೆ.
ಡ್ಯಾಮ್ ನಿರ್ಮಾಣದ ವೇಳೆ ಸಾವಿರಾರು ಲೋಡ್ ಮಣ್ಣು ತುಂಬಿರುವುದರಿಂದ ನದಿಯ ಸ್ವಾಭಾವಿಕ ಹರಿವು ಅಸ್ತವ್ಯಸ್ತಗೊಂಡು, ನದಿ ತನ್ನ ಪಥವನ್ನು ಬದಲಾಯಿಸಿದೆ. ಇದರ ಪರಿಣಾಮವಾಗಿ ಉಪ್ಪೂರು ಭಾಗದಲ್ಲಿ ಭಾರೀ ನದಿ ಕೊರೆತ ಉಂಟಾಗಿದೆ. ಈಗಾಗಲೇ ನೂರಾರು ತೆಂಗಿನ ಮರಗಳು ನದಿಗೆ ಬಲಿಯಾಗಿದ್ದು, ಕಾಂಕ್ರೀಟ್ ರಸ್ತೆಗೂ ಬಿರುಕು ಬಿದ್ದು ಕುಸಿತ ಉಂಟಾಗಿದೆ.
ಮಳೆಗಾಲ ಆರಂಭಕ್ಕೆ ಇನ್ನೂ ಕೇವಲ 40–50 ದಿನಗಳು ಬಾಕಿಯಿರುವ ಹಿನ್ನೆಲೆ, ಈ ಪ್ರದೇಶದಲ್ಲಿ ನೆರೆ ಭೀತಿ ಮತ್ತಷ್ಟು ಹೆಚ್ಚಾಗಿದೆ. ಮಳೆ ಆರಂಭವಾದರೆ ಸಂಪರ್ಕ ರಸ್ತೆ ಸಂಪೂರ್ಣವಾಗಿ ನದಿ ಪಾಲಾಗುವ ಸಾಧ್ಯತೆ ಇದೆ, ಇದರಿಂದ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗುವ ಆತಂಕ ಎದುರಾಗಿದೆ.
ಸ್ಥಳೀಯರ ಪ್ರಮುಖ ಬೇಡಿಕೆಗಳು:
* ಡ್ಯಾಮ್ ನಿರ್ಮಾಣಕ್ಕಾಗಿ ಹಾಕಲಾದ ಮಣ್ಣು ತಕ್ಷಣ ತೆರವುಗೊಳಿಸಿ, ನದಿ ಹರಿವನ್ನು ಸುಗಮಗೊಳಿಸುವುದು
* ನದಿ ಕೊರೆತ ಪ್ರದೇಶದಲ್ಲಿ ತಡೆಗೋಡೆ (ರಿಟೈನಿಂಗ್ ವಾಲ್) ನಿರ್ಮಾಣ
* ಹಾನಿಗೊಳಗಾದ ಸಂಪರ್ಕ ರಸ್ತೆಯನ್ನು ತಕ್ಷಣ ದುರಸ್ತಿ ಮಾಡುವುದು
ಈ ಸಮಸ್ಯೆಯ ಗಂಭೀರತೆ ಅರಿತು ಸಂಬಂಧಪಟ್ಟ ಇಲಾಖೆ ಹಾಗೂ ಜಿಲ್ಲಾಡಳಿತ ತಕ್ಷಣ ಸ್ಪಂದಿಸಬೇಕು, ಮಳೆಗಾಲಕ್ಕೂ ಮುನ್ನ ಅಗತ್ಯ ಕ್ರಮ ಕೈಗೊಳ್ಳಬೇಕು ಎನ್ನುವ ಆಗ್ರಹ ವ್ಯಕ್ತವಾಗಿದೆ.
ಜಿಲ್ಲಾಡಳಿತ ತಕ್ಷಣ ಸ್ಪಂದಿಸಿ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಬೇಕು ಎಂಬುದು ನಮ್ಮ ಆಶಯ.



