‘ಐಎನ್‌ಎಸ್ ಅರಿದಮನ್’ ಲೋಕಾರ್ಪಣೆ: ಭಾರತದ ಪರಮಾಣು ಬಲಕ್ಕೆ ಆನೆಬಲ
ಭಾರತದ ರಕ್ಷಣಾ ಕ್ಷೇತ್ರದಲ್ಲಿ ಇಂದು ಮಹತ್ವದ ಇತಿಹಾಸ ಬರೆಯಲಾಗಿದ್ದು, ಸಂಪೂರ್ಣ ದೇಶೀಯ ತಂತ್ರಜ್ಞಾನದಲ್ಲಿ ನಿರ್ಮಾಣಗೊಂಡಿರುವ ಮೂರನೇ ಪರಮಾಣು ಚಾಲಿತ ಬ್ಯಾಲಿಸ್ಟಿಕ್ ಕ್ಷಿಪಣಿ ಜಲಾಂತರ್ಗಾಮಿ ‘ಐಎನ್‌ಎಸ್ ಅರಿದಮನ್’ ಅನ್ನು ಭಾರತೀಯ ನೌಕಾಪಡೆಗೆ ಅಧಿಕೃತವಾಗಿ ಸೇರ್ಪಡೆಗೊಳಿಸಲಾಗಿದೆ.
ವಿಶಾಖಪಟ್ಟಣದ ನೌಕಾ ನೆಲೆಗೆ ಭೇಟಿ ನೀಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಈ ಅತ್ಯಾಧುನಿಕ ಯುದ್ಧನೌಕೆಯನ್ನು ದೇಶಕ್ಕೆ ಸಮರ್ಪಿಸಿದರು. ಈ ಮೂಲಕ ಹಿಂದೂ ಮಹಾಸಾಗರದಲ್ಲಿ ಶತ್ರು ರಾಷ್ಟ್ರಗಳ ಮೇಲೆ ನಿಗಾ ಇಡಲು ಭಾರತಕ್ಕೆ ಈಗ ಮತ್ತೊಂದು ಬಲಿಷ್ಠ ಕವಚ ದೊರೆತಂತಾಗಿದೆ.ಈ ಜಲಾಂತರ್ಗಾಮಿಯು ಅಡ್ವಾನ್ಸ್ಡ್ ಟೆಕ್ನಾಲಜಿ ವೆಸೆಲ್ ಯೋಜನೆಯಡಿ ಸಿದ್ಧಗೊಂಡಿದ್ದು, ಐಎನ್‌ಎಸ್ ಅರಿಹಂತ್ ಮತ್ತು ಐಎನ್‌ಎಸ್ ಅರಿಘಾಟ್ ನಂತರದ ಮೂರನೇ ಬೃಹತ್ ನೌಕೆಯಾಗಿದೆ. ಸರಿ ಸುಮಾರು 7,000 ಟನ್ ತೂಕದ ಈ ಜಲಾಂತರ್ಗಾಮಿಯು ಹಿಂದಿನ ನೌಕೆಗಳಿಗಿಂತ ಹೆಚ್ಚು ಶಕ್ತಿಶಾಲಿ ಹಾಗೂ ಸುಧಾರಿತ ಶಸ್ತ್ರಾಸ್ತ್ರ ವ್ಯವಸ್ಥೆಯನ್ನು ಹೊಂದಿದೆ. ವಿಶೇಷವಾಗಿ ಶತ್ರು ರಾಷ್ಟ್ರಗಳ ರೇಡಾರ್ ಕಣ್ಣಿಗೆ ಸಿಲುಕದಂತೆ ಸಮುದ್ರದ ಆಳದಲ್ಲಿ ಅತ್ಯಂತ ನಿಶ್ಯಬ್ದವಾಗಿ ಚಲಿಸುವ ‘ಸ್ಟೆಲ್ತ್’ ತಂತ್ರಜ್ಞಾನವನ್ನು ಇದು ಹೊಂದಿರುವುದು ಭಾರತದ ರಕ್ಷಣಾ ನೀತಿಗೆ ಹೊಸ ಆಯಾಮ ನೀಡಿದೆ.
ಈ ನೌಕೆಯ ಸೇರ್ಪಡೆಯೊಂದಿಗೆ ಭಾರತದ ‘ಪರಮಾಣು ತ್ರಿವಳಿ’ ಸಾಮರ್ಥ್ಯವು ಮತ್ತಷ್ಟು ಸದೃಢಗೊಂಡಿದೆ. ನೆಲ, ಜಲ ಹಾಗೂ ಆಕಾಶದ ಯಾವುದೇ ಮೂಲದಿಂದ ಪರಮಾಣು ದಾಳಿ ಎದುರಾದರೂ, ಸಮುದ್ರದ ಆಳದಿಂದಲೇ ಶತ್ರುಗಳ ಮೇಲೆ ಅತ್ಯಂತ ನಿಖರವಾಗಿ ಮರುದಾಳಿ ನಡೆಸುವ ‘ಸೆಕೆಂಡ್ ಸ್ಟ್ರೈಕ್’ ಸಾಮರ್ಥ್ಯವನ್ನು ಇದು ಒದಗಿಸುತ್ತದೆ. ಅರಿದಮನ್‌ನಲ್ಲಿ ಅಳವಡಿಸಲಾಗಿರುವ ಕೆ-4 ಬ್ಯಾಲಿಸ್ಟಿಕ್ ಕ್ಷಿಪಣಿಗಳು ಸುಮಾರು 3,500 ಕಿಲೋಮೀಟರ್ ದೂರದ ಗುರಿಯನ್ನು ಧ್ವಂಸಗೊಳಿಸುವ ಶಕ್ತಿ ಹೊಂದಿದ್ದು, ದೇಶದ ಗಡಿಯೊಳಗೆ ಪ್ರವೇಶಿಸುವ ಯಾವುದೇ ಆಪತ್ತನ್ನು ದೂರದಲ್ಲೇ ತಡೆಯುವ ಸಾಮರ್ಥ್ಯ ಹೊಂದಿವೆ.
ಇದೇ ಸಮಾರಂಭದಲ್ಲಿ ಪ್ರಾಜೆಕ್ಟ್ 17A ಅಡಿಯಲ್ಲಿ ನಿರ್ಮಾಣವಾಗಿರುವ ಅತ್ಯಾಧುನಿಕ ಸ್ಟೆಲ್ತ್ ಫ್ರಿಗೇಟ್ ‘ಐಎನ್‌ಎಸ್ ತಾರಗಿರಿ’ ಅನ್ನು ಸಹ ನೌಕಾಪಡೆಗೆ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ರಕ್ಷಣಾ ಸಚಿವರು, ಅರಿದಮನ್ ಎನ್ನುವ ಹೆಸರಿಗೆ ತಕ್ಕಂತೆ ಇದು ವೈರಿಗಳನ್ನು ಮಣಿಸುವ ಅಪ್ರತಿಮ ಶಕ್ತಿಯಾಗಿದ್ದು, ಆತ್ಮನಿರ್ಭರ ಭಾರತ ಯೋಜನೆಯಡಿ ರಕ್ಷಣಾ ಉತ್ಪಾದನೆಯಲ್ಲಿ ನಾವು ಸಾಧಿಸಿದ ಪ್ರಗತಿಗೆ ಸಾಕ್ಷಿಯಾಗಿದೆ ಎಂದು ಬಣ್ಣಿಸಿದರು. ಪ್ರಸ್ತುತ ಪ್ರಾದೇಶಿಕ ಭದ್ರತೆ ಮತ್ತು ಜಾಗತಿಕ ರಾಜತಾಂತ್ರಿಕ ಪರಿಸ್ಥಿತಿಯಲ್ಲಿ ಭಾರತದ ಈ ಸಿದ್ಧತೆಯು ನೆರೆ ರಾಷ್ಟ್ರಗಳ ನೌಕಾ ಚಟುವಟಿಕೆಗಳಿಗೆ ಪ್ರಬಲ ಸಂದೇಶ ರವಾನಿಸಿದೆ.