ಉಡುಪಿ ಕ್ರಿಶ್ಚಿಯನ್ ಪ.ಪೂ ಕಾಲೇಜಿನಲ್ಲಿ ವಿದ್ಯಾರ್ಥಿ ಪರಿಷತ್ ಉದ್ಘಾಟನೆ, ಪಾಂಗಾಳ ಕರುಣಾಕರ ಶೆಟ್ಟಿ ನಗದು ಬಹುಮಾನ ವಿತರಣೆ
ಉಡುಪಿಯ ಕ್ರಿಶ್ಚಿಯನ್ ಪದವಿಪೂರ್ವ ಕಾಲೇಜಿನ 2026–27ನೇ ಶೈಕ್ಷಣಿಕ ಸಾಲಿನ ವಿದ್ಯಾರ್ಥಿ ಪರಿಷತ್ತಿನ ಉದ್ಘಾಟನಾ ಸಮಾರಂಭ ಹಾಗೂ 2026ನೇ ಸಾಲಿನ ಪಾಂಗಾಳ ಕರುಣಾಕರ ಶೆಟ್ಟಿ ನಗದು ಬಹುಮಾನ ವಿತರಣಾ ಕಾರ್ಯಕ್ರಮವು ಬಡಗುಬೆಟ್ಟು ಕೋ-ಆಪರೇಟಿವ್ ಸೊಸೈಟಿಯ ಜಗನ್ನಾಥ ಸಭಾಂಗಣದಲ್ಲಿ ನಡೆಯಿತು.
ಹೇಮಚಂದ್ರ ಕುಮಾರ್ ಬಿಷಪ್ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಮಾತನಾಡಿ, ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ನಾಯಕತ್ವ, ಶಿಸ್ತು ಹಾಗೂ ಸೇವಾ ಮನೋಭಾವವನ್ನು ಬೆಳೆಸಿಕೊಂಡು ಸಮಾಜಮುಖಿ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಕ್ರಿಶ್ಚಿಯನ್ ಪಿಯು ಕಾಲೇಜಿನ ಹಿತೈಷಿ ಸ್ಟೀಫನ್ ಕರ್ಕಡ, ವಲಯಾಧ್ಯಕ್ಷ ರೆ. ಕಿಶೋರ್ ಕುಮಾರ್, ನಗದು ಬಹುಮಾನಗಳ ಪ್ರಾಯೋಜಕರಾದ ಪಾಂಗಾಳ ಕರುಣಾಕರ ಶೆಟ್ಟಿ ದಂಪತಿಗಳು, ಕಾಂಗ್ರೆಸ್ ಮುಖಂಡ ಹರೀಶ್ ಕಿಣಿ ಅಲೆವೂರು, ಹಾಗೂ ಬಡಗುಬೆಟ್ಟು ಕೋ-ಆಪರೇಟಿವ್ ಸೊಸೈಟಿಯ ಪ್ರಧಾನ ವ್ಯವಸ್ಥಾಪಕ ರಾಜೇಶ್ ಶೇರಿಗಾರ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿ ಪರಿಷತ್ತನ್ನು ಅಧಿಕೃತವಾಗಿ ಉದ್ಘಾಟಿಸಲಾಯಿತು. ಕಳೆದ ವರ್ಷದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆಗೈದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪಾಂಗಾಳ ಕರುಣಾಕರ ಶೆಟ್ಟಿ ನಗದು ಬಹುಮಾನ ನೀಡಿ ಗೌರವಿಸಲಾಯಿತು. ವಿದ್ಯಾರ್ಥಿಗಳ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಇಂತಹ ಕಾರ್ಯಕ್ರಮಗಳು ಆತ್ಮವಿಶ್ವಾಸ, ನಾಯಕತ್ವ ಮತ್ತು ಜವಾಬ್ದಾರಿಯುತ ವ್ಯಕ್ತಿತ್ವವನ್ನು ಬೆಳೆಸಲು ಸಹಕಾರಿಯಾಗುತ್ತವೆ ಎಂದು ಅತಿಥಿಗಳು ಅಭಿಪ್ರಾಯಪಟ್ಟರು.
ಶಿಕ್ಷಣಕ್ಕೆ ಬೆಂಬಲ ನೀಡುವ ಉದ್ದೇಶದಿಂದ ಬಡಗುಬೆಟ್ಟು ಕೋ-ಆಪರೇಟಿವ್ ಸೊಸೈಟಿಯವರು ಸುಮಾರು ₹70,000 ಮೌಲ್ಯದ ಕಂಪ್ಯೂಟರ್ ಹಾಗೂ 500 ಕಿಂಗ್ ಸೈಜ್ ನೋಟ್ಸ್ ಪುಸ್ತಕಗಳನ್ನು ಕಾಲೇಜಿಗೆ ದೇಣಿಗೆಯಾಗಿ ನೀಡಿದ್ದು, ಅವರ ಈ ಅಮೂಲ್ಯ ಸಹಕಾರವನ್ನು ಗೌರವಿಸಿ ಸೊಸೈಟಿಯ ಪ್ರಧಾನ ವ್ಯವಸ್ಥಾಪಕರಾದ ರಾಜೇಶ್ ಶೇರಿಗಾರ್ ಅವರನ್ನು ಕಾಲೇಜಿನ ವತಿಯಿಂದ ಸನ್ಮಾನಿಸಲಾಯಿತು.
ಕಾಲೇಜಿನ ಪ್ರಾಂಶುಪಾಲೆ ಶ್ವೇತಾ ಶ್ರೀನಿವಾಸ ಅತಿಥಿಗಳನ್ನು ಸ್ವಾಗತಿಸಿದರು. ಶೈಲಾ ವಂದಿಸಿದರು. ಕಾಲೇಜಿನ ಕನ್ನಡ ಉಪನ್ಯಾಸಕಿ ಅನಿತಾ ಸಿಕ್ವೇರಾ ಕಾರ್ಯಕ್ರಮವನ್ನು ನಿರೂಪಿಸಿದರು.