ಸೈಬರ್ ಅಧಿಕಾರಿಗಳ ಸೋಗಿನಲ್ಲಿ ನಿವೃತ್ತ ಬ್ಯಾಂಕ್ ಉದ್ಯೋಗಿಗೆ 22 ಲಕ್ಷ ರೂ. ವಂಚನೆ
ಸೈಬರ್ ಕ್ರೈಮ್, ಜಾರಿ ನಿರ್ದೇಶನಾಲಯ (ಇ.ಡಿ.) ಹಾಗೂ ಸಿಬಿಐ ಅಧಿಕಾರಿಗಳ ಹೆಸರಿನಲ್ಲಿ ಕರೆ ಮಾಡಿ ಬೆದರಿಕೆ ಹಾಕಿದ ವಂಚಕರು, ಉಡುಪಿ ತಾಲೂಕಿನ ನಿವೃತ್ತ ಬ್ಯಾಂಕ್ ಉದ್ಯೋಗಿಯೊಬ್ಬರಿಂದ 22 ಲಕ್ಷ ರೂ. ಹಣ ವರ್ಗಾಯಿಸಿಕೊಂಡು ವಂಚಿಸಿರುವ ಘಟನೆ ನಡೆದಿದೆ.
ಉಡುಪಿ ತಾಲೂಕಿನ ನಿವಾಸಿ ಹಾಗೂ ನಿವೃತ್ತ ಬ್ಯಾಂಕ್ ಉದ್ಯೋಗಿ ಜಯಕರ ಕಾಮತ್ ಪಿ. (76) ಅವರು ನೀಡಿದ ದೂರಿನ ಪ್ರಕಾರ, ಜುಲೈ 10ರಂದು ಮಧ್ಯಾಹ್ನ ಸುಮಾರು 3 ಗಂಟೆಗೆ ಅವರ ಮೊಬೈಲ್‌ಗೆ ಅಪರಿಚಿತ ಸಂಖ್ಯೆಯಿಂದ ವಾಟ್ಸಾಪ್ ವಿಡಿಯೊ ಕರೆ ಬಂದಿದೆ. ಕರೆ ಸ್ವೀಕರಿಸಿದ ವೇಳೆ ಪೊಲೀಸ್ ಸಮವಸ್ತ್ರ ಧರಿಸಿದ್ದ ವ್ಯಕ್ತಿಯೊಬ್ಬ, ತಾನು ಮುಂಬೈನ ಕೊಲಾಬಾ ಸೈಬರ್ ಕ್ರೈಮ್ ವಿಭಾಗದ ಅಧಿಕಾರಿಯೆಂದು ಪರಿಚಯಿಸಿಕೊಂಡಿದ್ದಾನೆ.
ಬಳಿಕ, ಜಯಕರ ಕಾಮತ್ ಅವರ ಹೆಸರಿನಲ್ಲಿ ಮುಂಬೈನ ಕೆನರಾ ಬ್ಯಾಂಕ್‌ನಲ್ಲಿ ಖಾತೆಯಿದ್ದು, ಆ ಖಾತೆಯ ಮೂಲಕ ನೂರಾರು ಕೋಟಿ ರೂಪಾಯಿ ಅಕ್ರಮ ಹಣ ವರ್ಗಾವಣೆಯಾಗಿರುವುದಾಗಿ ಹೇಳಿ, ಬ್ಯಾಂಕ್ ಖಾತೆ ಹಾಗೂ ಎಟಿಎಂ ಕಾರ್ಡ್ ವಿವರಗಳನ್ನು ಕೇಳಿದ್ದಾನೆ. ಜುಲೈ 11ರಿಂದ 16ರವರೆಗೆ ಒಂದೇ ಮೊಬೈಲ್ ಸಂಖ್ಯೆಯಿಂದ ಪದೇ ಪದೇ ವಾಟ್ಸಾಪ್ ಕರೆ ಮಾಡಿ, ತಾವು ಎಡಿಜಿಪಿ ವಿಶ್ವಾಸ್, ಇ.ಡಿ. ಅಧಿಕಾರಿ ಅನಿಲ್ ಕುಮಾರ್ ಹಾಗೂ ಸೈಬರ್ ಕ್ರೈಮ್ ಅಧಿಕಾರಿಗಳು ಎಂದು ನಂಬಿಸಿದ್ದಾರೆ.
'ಫಂಡ್ ವೆರಿಫಿಕೇಷನ್' ಹೆಸರಿನಲ್ಲಿ ಬ್ಯಾಂಕ್ ಖಾತೆಯಲ್ಲಿದ್ದ ಹಣವನ್ನು ಆರ್‌ಟಿಜಿಎಸ್ ಮೂಲಕ ತಾವು ಸೂಚಿಸಿದ ಖಾತೆಗೆ ವರ್ಗಾಯಿಸುವಂತೆ ಸೂಚಿಸಿದ್ದು, ಆರೋಪಿಗಳ ಮಾತುಗಳನ್ನು ನಂಬಿದ ಜಯಕರ ಕಾಮತ್ ಅವರು ಒಟ್ಟು 22 ಲಕ್ಷ ರೂ. ಹಣವನ್ನು ಅವರು ತಿಳಿಸಿದ ಬ್ಯಾಂಕ್ ಖಾತೆಗೆ ವರ್ಗಾಯಿಸಿದ್ದಾರೆ. ಬಳಿಕ ತಾವು ಸೈಬರ್ ವಂಚನೆಗೆ ಒಳಗಾಗಿರುವುದು ಬೆಳಕಿಗೆ ಬಂದಿದೆ.
ಈ ಸಂಬಂಧ ಜಯಕರ ಕಾಮತ್ ಅವರು ನೀಡಿದ ದೂರಿನ ಮೇರೆಗೆ ಉಡುಪಿ ಸೈಬರ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.