ಮೇ. 18: ಕೊಡವೂರಿನಲ್ಲಿ ಬೃಹತ್ ಉದ್ಯೋಗ ಮೇಳ: 60ಕ್ಕೂ ಹೆಚ್ಚು ಕಂಪನಿಗಳು ಭಾಗಿ
ಯುವಕರಿಗೆ ಉದ್ಯೋಗ, ಇಂಟರ್ನ್‌ಶಿಪ್ ಮತ್ತು ವೃತ್ತಿ ಮಾರ್ಗದರ್ಶನ ಒದಗಿಸುವ ಉದ್ದೇಶದಿಂದ ಮೇ 18ರಂದು ಉಡುಪಿ ಜಿಲ್ಲೆಯ ಕೊಡವೂರಿನಲ್ಲಿ ಬೃಹತ್ ಉದ್ಯೋಗ ಮೇಳ ನಡೆಯಲಿದೆ. ಈ ಕಾರ್ಯಕ್ರಮವನ್ನು ಸಾರಲತಾ ಐಟಿ ಸೊಲ್ಯೂಷನ್ಸ್ ಮತ್ತು ಸರಳಾ ಬಾಬುರಾವ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ, ಶ್ರೀ ಶಂಕರ ನಾರಾಯಣ ದೇವಸ್ಥಾನ ಮತ್ತು ತೆಂಕನಿಡಿಯೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಯೋಗದಲ್ಲಿ ಆಯೋಜಿಸಲಾಗಿದೆ ಎಂದು ಉದ್ಯೋಗ ಮೇಳದ ಅಧ್ಯಕ್ಷೆ ಡಾ. ದಿವ್ಯರಾಣಿ ತಿಳಿಸಿದ್ದಾರೆ.
ಉಡುಪಿಯಲ್ಲಿ ಅವರು ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. ಮ್ಯಾನೇಜ್‌ಮೆಂಟ್, ಎಂಜಿನಿಯರಿಂಗ್, ಉತ್ಪಾದನಾ ವಲಯ, ಆರೋಗ್ಯ ಸೇವೆ, ಹೋಟೆಲ್, ಬ್ಯಾಂಕಿಂಗ್ ಮತ್ತು ಹಣಕಾಸು, ಮಾರಾಟ ಮತ್ತು ಮಾರುಕಟ್ಟೆ, ತಾಂತ್ರಿಕ ಸೇವೆಗಳು, ಲಾಜಿಸ್ಟಿಕ್ಸ್ ಹಾಗೂ ಸೇವಾ ವಲಯ, ಕೌಶಲ್ಯ ವಿವಿಧ ಕ್ಷೇತ್ರಗಳ 60 ಕ್ಕೂ ಹೆಚ್ಚು ಪ್ರತಿಷ್ಠಿತ ಕಂಪನಿಗಳು ಈ ಉದ್ಯೋಗ ಮೇಳದಲ್ಲಿ ಭಾಗವಹಿಸಲಿವೆ.
ಟೊಯೋಟಾ-ಕಿರ್ಲೋಸ್ಕರ್, ಇನ್‌ವೆಂಜರ್ ಟೆಕ್ನಾಲಜೀಸ್, ಮೆಜೆಸ್ಟಿಕ್ ಗ್ಲೋಬಲ್ ಲಾಜಿಸ್ಟಿಕ್ಸ್, ಅನಾನ್ ಗ್ರೂಪ್ ವಿನ್‌ಮ್ಯಾನ್ ಸಾಫ್ಟ್‌ವೇರ್, ಅಮೆಜಾನ್, ಬ್ರೇವರಾ ಟೆಕ್ನಾಲಜೀಸ್, ವಿಆರ್‌ಎನ್ ಇನ್ಫೋಟೆಕ್, ಡಾ. ರೆಡ್ಡಿಸ್ ಫೌಂಡೇಶನ್, ಸ್ವಿಗ್ಲಿ, ಎಚ್‌ಡಿಎಫ್‌ಸಿ ಬ್ಯಾಂಕ್, ಮಣಿಪಾಲ್ ಪೇಮೆಂಟ್ ಅಂಡ್ ಐಡೆಂಟಿಟಿ ಮತ್ತು ಅಕೋಲೇಡ್ ಸೇರಿದಂತೆ ಅನೇಕ ಪ್ರಮುಖ ಕಂಪನಿಗಳು ಭಾಗವಹಿಸಲಿವೆ.
ಪದವಿ, ಡಿಪ್ಲೊಮಾ, ಎಂಜಿನಿಯರಿಂಗ್, ಐಟಿಐ, ಪಿಯುಸಿ, ಎಸ್‌ಎಸ್‌ಎಲ್‌ಸಿ ಹಾಗೂ ವಿವಿಧ ಕೌಶಲ್ಯ ಆಧಾರಿತ, ಅರ್ಹತೆ ಹೊಂದಿದ ಅಭ್ಯರ್ಥಿಗಳಿಗೆ 6,000 - ಕ್ಕೂ ಹೆಚ್ಚು ಉದ್ಯೋಗಾವಕಾಶಗಳು ಲಭ್ಯವಾಗಲಿವೆ. ಹೊಸ ಅಭ್ಯರ್ಥಿಗಳು ಹಾಗೂ ಅನುಭವ ಹೊಂದಿದವರಿಗೆ ಸಮಾನ ಅವಕಾಶಗಳು ದೊರೆಯಲಿದೆ.
ಅಭ್ಯರ್ಥಿಗಳಿಗೆ ನೇರ ಸಂದರ್ಶನಗಳಲ್ಲಿ ಭಾಗವಹಿಸುವುದು, ಕಂಪನಿ ಪ್ರತಿನಿಧಿಗಳೊಂದಿಗೆ ಸಂವಾದ ನಡೆಸುವುದು ಹಾಗೂ ಬೆಂಗಳೂರು, ಮೈಸೂರು, ಮಂಗಳೂರು ಮತ್ತು ಉಡುಪಿಯಲ್ಲಿ ಉದ್ಯೋಗ ಅವಕಾಶಗಳನ್ನು ಅರಿಯುವ ಅವಕಾಶ ಸಿಗಲಿದೆ.
ಈ ಬಾರಿ ವಿಶೇಷವಾಗಿ ಸ್ಮಾರ್ಟ್ ಅಪ್ ಹಾಗೂ ಸ್ವಯಂ ಉದ್ಯೋಗ ಮಾರ್ಗದರ್ಶನ ಕಾರ್ಯಕ್ರಮಗಳನ್ನು ಮೊದಲ ಬಾರಿಗೆ ಉಡುಪಿಯಲ್ಲಿ ಪರಿಚಯಿಸಲಾಗುತ್ತಿದೆ. ಮಣಿಪಾಲ್ ಯುನಿವರ್ಸಲ್ ಬಿಸಿನೆಸ್ ಇಂಕ್ಯೂಬೇಟರ್ಸ್, ಯೆನಪೋಯ ಟೆಕ್ನಾಲಜಿ ಇಂಕ್ಯೂಬೇಟರ್ ಮತ್ತು ರುಡೋಟಿ ಸಂಸ್ಥೆಗಳು ಉದ್ಯಮ ಆರಂಭಿಸಲು ಬಯಸುವ ಯುವಕರಿಗೆ ಮಾರ್ಗದರ್ಶನ ಹಾಗೂ ಮೆಂಟರ್‌ಶಿಪ್ ನೀಡಲಿವೆ.
ಒಂದೇ ವೇದಿಕೆಯಲ್ಲಿ ತಕ್ಷಣದ ಸಂದರ್ಶನ, ತಕ್ಷಣದ ಆಯ್ಕೆ, ಇಂಟರ್ನ್‌ಶಿಪ್ ಅವಕಾಶಗಳು ಹಾಗೂ ಉದ್ಯಮಿತ್ಯ ಮಾರ್ಗದರ್ಶನವನ್ನು ಒದಗಿಸುವ ಸಮಗ್ರ ವೃತ್ತಿ ವೇದಿಕೆಯಾಗಿ ಈ ಕಾರ್ಯಕ್ರಮ ರೂಪಿಸಲಾಗಿದೆ. ವಿಶೇಷವಾಗಿ ಗ್ರಾಮೀಣ ಭಾಗದ ಯುವಕರು ಈ ಸುವರ್ಣಾವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಅಭ್ಯರ್ಥಿಗಳು https://forms.gle/Zvx4BmwCdYSch1ZF6 ಗೂಗಲ್ ಲಿಂಕ್ ಮೂಲಕ ನೋಂದಣಿ ಮಾಡಿಕೊಳ್ಳಬಹುದು. ಅಥವಾ ಮೇ. 18ರಂದು ಬೆಳಗ್ಗೆ 9 ಗಂಟೆಯಿಂದ 4 ರವರೆಗೆ ಕೊಡವೂರಿನ ಶ್ರೀ ಶಂಕರ ನಾರಾಯಣ ದೇವಸ್ಥಾನದ ಸಮೀಪದ ವಿಪ್ರಶ್ರೀ ಸಭಾಭವನಕ್ಕೆ ನೇರವಾಗಿ ಭೇಟಿ ನೀಡಿ ಭಾಗವಹಿಸಬಹುದು. ಅಭ್ಯರ್ಥಿಗಳು ಕನಿಷ್ಠ 5 ರಿಂದ 7 ಪತಿಗಳ CV ಹಾಗೂ ID Card ತರಬೇಕು ಎಂದು ತಿಳಿಸಿದ್ದಾರೆ.
ಉದ್ಯೋಗ ಮೇಳದ ಕಾರ್ಯದರ್ಶಿ ರೇವತಿ ನಾದ್ಗಿರಿ ಮಾತನಾಡಿ, ಮೇ. 18ರಂದು ನಡೆಯುವ ಉದ್ಘಾಟಣಾ ಕಾರ್ಯಕ್ರಮದಲ್ಲಿ ಸ್ಪೀಕರ್ ಯು.ಟಿ ಖಾದರ್, ಮಣಿಪಾಲ ಮಾಹೆಯ ಸಹ ಕುಲಾಧಿಪತಿ ಹೆಚ್.ಎಸ್ ಬಲ್ಲಾಳ್, ಪ್ರಸಾದ್ ರಾಜ್ ಕಾಂಚನ್, ಹೆಚ್.ಪಿ.ಆರ್ ಗ್ರೂಪ್ ನ ಅಧ್ಯಕ್ಷ ಹರಿಪ್ರಸಾದ್ ರೈ, ನಗರಸಭೆ ಆಯುಕ್ತ ಮಹಾಂತೇಶ್ ಹಂಗರಗಿ, ಶ್ರೀನಿವಾಸ್ ಯುನಿವರ್ಸಿಟಿಯ ಡೈರೆಕ್ಟರ್ ಡಾ. ದಿವ್ಯಾ ರಾಣಿ ಪ್ರದೀಪ್ ಮೊದಲಾದವರು ಭಾಗವಹಿಸಲಿದ್ದಾರೆ ಎಂದರು.
ಸುದ್ದಿಗೋಷ್ಟಿಯಲ್ಲಿ ಸಾತ್ವಿಕ್ ಎಸ್ ಆಚಾರ್ಯ, ಧ್ರುವ್ ರಾಜ್ ಮೊದಲಾದವರು ಉಪಸ್ಥಿತರಿದ್ದರು.