6 ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಕಳವು ಆರೋಪಿಯ ಬಂಧನ
Tuesday, May 12, 2026
6 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯೊಬ್ಬನನ್ನು ಪಣಂಬೂರು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಅಸ್ಸಾಂ ರಾಜ್ಯದ ಕಾಚಾರ್ ಜಿಲ್ಲೆಯ ಪಾರೂಲ್ ಹುಸೈನ್ ಲಸ್ಕರ್ ಯಾನೆ ಪಾರೂಲ್ (34) ಬಂಧಿತ ಆರೋಪಿ. 2018ರಲ್ಲಿ ಬೈಕಂಪಾಡಿಯ ಕುಡುಂಬೂರು ಎಂಬಲ್ಲಿನ ಪೂಜಾ ಮೊಬೈಲ್ಸ್ ಎಂಬ ಮೊಬೈಲ್ ಅಂಗಡಿಗೆ ಕನ್ನ ಹಾಕಿದ್ದ ಕಳ್ಳರ ತಂಡ 2.17 ಲಕ್ಷ ರೂ.ಮೌಲ್ಯದ ನಗದು ಹಾಗೂ ಸೊತ್ತುಗಳನ್ನು ಕಳವುಗೈದು ಪರಾರಿಯಾಗಿತ್ತು.
ಈ ಪ್ರಕರಣದಲ್ಲಿದ್ದ ಆರೋಪಿಯು ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೇ ತಲೆ ಮರೆಸಿಕೊಂಡಿದ್ದ. ನ್ಯಾಯಾಯಲವು ಈತನ ಮೇಲೆ ಬಂಧನದ ವಾರೆಂಟ್ ಜಾರಿಗೊಳಿಸಿತ್ತು.
ಈ ಹಿನ್ನೆಲೆಯಲ್ಲಿ ಪಣಂಬೂರು ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಸಲೀಮ್ ಅಬ್ಬಾಸ್ ಅವರು ಮೇಲಾಧಿಕಾರಿಗಳ ನಿರ್ದೇಶನದಂತೆ ಆರೋಪಿಯನ್ನು ಕೇರಳದ ಮಂಜೇಶ್ವರದಲ್ಲಿ ಮೇ.11ರಂದು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ ಎಂದು ತಿಳಿದು ಬಂದಿದೆ.
ಪೊಲೀಸ್ ನಿರೀಕ್ಷಕ ಸಲೀಮ್ ಅಬ್ಬಾಸ್ ಅವರ ಮಾರ್ಗದರ್ಶನದಲ್ಲಿ, ಠಾಣಾ ಹೆಡ್ ಕಾನ್‌ಸ್ಟೆಬಲ್ ಗಳಾದ ನವೀನ ಚಂದ್ರ, ಸಯ್ಯದ್ ಇಮ್ತಿಯಾಝ್, ಸಿಪಿಸಿಗಳಾದ ರಾಕೇಶ್ ಮತ್ತು ವಿನಯ್ ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.