ಉಡುಪಿಯಲ್ಲಿ ಕರ್ನಾಟಕ ರಾಜ್ಯ ಎಫ್‌ಐಪಿ 8ನೇ ಪಾಲುದಾರರ ಸಭೆ : ಸುಸ್ಥಿರ ಮೀನುಗಾರಿಕೆಗೆ ಒತ್ತು
ಕರ್ನಾಟಕ ರಾಜ್ಯ ಮೀನುಗಾರಿಕೆ ಸುಧಾರಣಾ ಯೋಜನೆ (ಎಫ್‌ಐಪಿ) ಅಡಿಯಲ್ಲಿ ಸ್ಮಾಲ್ ಪೆಲಾಜಿಕ್ ಪರ್ಸ್ಸೈನ್ ಮೀನುಗಾರಿಕೆ ಯೋಜನೆಯ 8ನೇ ಪಾಲುದಾರರ ಸಭೆ ಸೋಮವಾರ ಉಡುಪಿ ಜಿಲ್ಲೆಯ ಎರ್ಮಾಳಿನ ಪೆನಿನ್ಸುಲಾ ಡೆಲ್ ಮಾರ್ ಬೀಚ್ ರೆಸಾರ್ಟ್‌ನಲ್ಲಿ ನಡೆಯಿತು.
ಅವಂತಿ ಫೀಡ್ಸ್ ಲಿಮಿಟೆಡ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಡಾ. ಅಲ್ಲೂರಿ ಇಂದ್ರಕುಮಾರ್ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಸಭೆಯಲ್ಲಿ ಸುಸ್ಥಿರ ಮೀನುಗಾರಿಕೆ, ಜವಾಬ್ದಾರಿಯುತ ಮೀನುಗಾರಿಕೆ ಪದ್ಧತಿ, ಸಮುದ್ರ ಆಹಾರದ ಪತ್ತೆಹಚ್ಚುವಿಕೆ ವ್ಯವಸ್ಥೆ ಹಾಗೂ ಭಾರತದ ಸಮುದ್ರ ಆಹಾರ ಸರಬರಾಜು ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸುವ ಕುರಿತು ಸಮಗ್ರ ಚರ್ಚೆ ನಡೆಯಿತು. ಕರ್ನಾಟಕ ರಾಜ್ಯ ಎಫ್‌ಐಪಿಯ ಮುಖ್ಯಸ್ಥ ಉದಯಕುಮಾರ್ ಸಾಲ್ಯಾನ್ ಮಾತನಾಡಿ, ಕಳೆದ ಎರಡು ವರ್ಷಗಳಿಂದ ಅಪರೂಪದ, ಅಪಾಯದಲ್ಲಿರುವ ಹಾಗೂ ಸಂರಕ್ಷಿತ (ಇಟಿಪಿ) ಜಾತಿಗಳ ಸಂರಕ್ಷಣೆ, ಸ್ವಚ್ಛತೆ, ಕಾರ್ಮಿಕರ ಕಲ್ಯಾಣ ಮತ್ತು ಅನೈತಿಕ ಮೀನುಗಾರಿಕೆ ತಡೆ ಕುರಿತು ವಿವಿಧ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಮೀನುಗಾರರು ಹಾಗೂ ಮೀನುಗಾರಿಕಾ ದೋಣಿಗಳಿಗೆ ಸಂರಕ್ಷಿತ ಜಾತಿಗಳ ಕುರಿತು ಜಾಗೃತಿ ಫಲಕಗಳನ್ನು ವಿತರಿಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಯೋಜನಾ ಸಂಯೋಜಕಿ ಡಾ. ನಿಮ್ನುವಲ್ ಪೀವ್ರೋಂಗ್ಗಾಮ್, ಐಸಿಎಆರ್-ಸಿಎಮ್‌ಎಫ್‌ಆರ್‌ಐ ಮಂಗಳೂರು ಕೇಂದ್ರದ ಮುಖ್ಯ ವಿಜ್ಞಾನಿ ಡಾ. ಸುಜಿತಾ ಥಾಮಸ್, ರಾಷ್ಟ್ರೀಯ ಕಾರ್ಯಪಡೆ ಸದಸ್ಯ ಗಣೇಶ್ ನಖವಾ, ದಕ್ಷಿಣ್ ಫೌಂಡೇಶನ್‌ನ ಡಾ. ನವೀನ್ ನಂಬೂದ್ರಿ, ದೇವಿ ಸೀಫುಡ್ಸ್ ಲಿಮಿಟೆಡ್‌ನ ಸರಬ್ಪ್ರೀತ್ ಸಿಂಗ್, ಅವಂತಿ ಫೀಡ್ಸ್ ಲಿಮಿಟೆಡ್‌ನ ನಂದ ಕಿಶೋರ್ ಹಾಗೂ ಸೀಫುಡ್ ಟಾಸ್ಕ್ ಫೋರ್ಸ್‌ನ ಎ.ಬಿ. ಜೈನ್ ವಿವಿಧ ವಿಷಯಗಳ ಕುರಿತು ಉಪನ್ಯಾಸ ನೀಡಿದರು.
ಸಭೆಯಲ್ಲಿ ಭಾರತೀಯ ಫಿಶ್‌ಮಿಲ್ ಮತ್ತು ಮೀನು ಎಣ್ಣೆ ರಫ್ತುದಾರರ ಸಂಘದ ಗೌರವಾಧ್ಯಕ್ಷ ಪ್ರಮೋದ್ ಮಧ್ವರಾಜ್, ಮೀನುಗಾರಿಕಾ ಇಲಾಖೆಯ ಹೆಚ್ಚುವರಿ ನಿರ್ದೇಶಕ ಮಹೇಶ್ ಕುಮಾರ್ ಯು., ಎಂಪಿಇಡಿಎ ಉಪನಿರ್ದೇಶಕ ಮನೋಜ್ ಕುಮಾರ್ ಟಿ.ಜಿ., ಜನತಾ ಗ್ರೂಪ್ ಅಧ್ಯಕ್ಷ ಆನಂದ್ ಸಿ. ಕುಂದರ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ರಮೇಶ್ ಎಂ.ಆರ್. ಸ್ವಾಗತಿಸಿ ಸಭೆಯ ಉದ್ದೇಶ ವಿವರಿಸಿದರು. ಚೇತನ್ ಕುಮಾರ್ ಸುವರ್ಣ ವಂದಿಸಿದರು. ಡಾ. ಶಿವರಕುಮಾರ್ ಮಗದ ಕಾರ್ಯಕ್ರಮ ನಿರೂಪಿಸಿದರು.
ಸಭೆಯಲ್ಲಿ ಸರ್ಕಾರದ ವಿವಿಧ ಇಲಾಖೆಗಳು, ಸಂಶೋಧನಾ ಸಂಸ್ಥೆಗಳು, ಸಮುದ್ರ ಆಹಾರ ಕೈಗಾರಿಕೆ, ರಫ್ತುದಾರರು, ಸುಸ್ಥಿರ ಮೀನುಗಾರಿಕೆ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಘಟನೆಗಳು ಹಾಗೂ ಮೀನುಗಾರರ ಪ್ರತಿನಿಧಿಗಳು ಭಾಗವಹಿಸಿದ್ದರು. ಯಶಸ್ವಿ ಫಿಶ್‌ಮಿಲ್ ಅಂಡ್ ಆಯಿಲ್ ಕಂಪನಿ ಉಡುಪಿ, ಯಶಸ್ವಿ ಫಿಶ್‌ಮಿಲ್ ಅಂಡ್ ಆಯಿಲ್ ಕಂಪನಿ ಎಸ್‌ಇಝೆಡ್ ಮಂಗಳೂರು, ಆಕಾಶ್ ಫಿಶ್‌ಮಿಲ್ ಅಂಡ್ ಫಿಶ್ ಆಯಿಲ್ ಕಂಪನಿ, ಮುಕ್ಕ ಪ್ರೋಟೀನ್ಸ್ ಲಿಮಿಟೆಡ್, ರಾಜ್ ಫಿಶ್‌ಮಿಲ್ ಅಂಡ್ ಆಯಿಲ್ ಕಂಪನಿ, ಜನತಾ ಫಿಶ್‌ಮಿಲ್ ಅಂಡ್ ಆಯಿಲ್ ಕಂಪನಿ ಹಾಗೂ ಬ್ಲೂ ಲೈನ್ಸ್ ಫುಡ್ಸ್ (ಇಂಡಿಯಾ) ಲಿಮಿಟೆಡ್ ಸಂಸ್ಥೆಗಳು ಎಫ್‌ಐಪಿಯ ಸದಸ್ಯ ಸಂಸ್ಥೆಗಳಾಗಿ ಭಾಗವಹಿಸಿದ್ದವು.