ಯಕ್ಷಶಿಕ್ಷಣ ವಿದ್ಯಾರ್ಥಿಗಳಿಗೆ ಮುಖವರ್ಣಿಕೆ–ವೇಷಭೂಷಣ ಶಿಬಿರ ಉದ್ಘಾಟನೆ
Monday, May 11, 2026
ಉಡುಪಿಯ ಯಕ್ಷಶಿಕ್ಷಣ ಟ್ರಸ್ಟ್ ವತಿಯಿಂದ ಯಕ್ಷಶಿಕ್ಷಣದ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾದ ನಾಲ್ಕು ದಿನಗಳ ಮುಖವರ್ಣಿಕೆ ಮತ್ತು ವೇಷಭೂಷಣ ಶಿಬಿರಕ್ಕೆ ಚಾಲನೆ ನೀಡಲಾಯಿತು.
ಪೇಜಾವರ ಮಠದ ವಿಷ್ಣುಮೂರ್ತಿ ಆಚಾರ್ಯರು ಶಿಬಿರವನ್ನು ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಯಕ್ಷಗಾನ ಕಲಾರಂಗದ ಕಟ್ಟಡದಲ್ಲಿ ನಡೆಯುತ್ತಿರುವ ಶಿಬಿರದಲ್ಲಿ 35 ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ.
ಕಳೆದ ತಿಂಗಳು ಟ್ರಸ್ಟ್ ವತಿಯಿಂದ ಒಂದು ವಾರದ ಸನಿವಾಸ ಶಿಬಿರ ಹಮ್ಮಿಕೊಳ್ಳಲಾಗಿದ್ದು, ಅದರಲ್ಲಿ ಭಾಗವಹಿಸಿದ್ದ 103 ವಿದ್ಯಾರ್ಥಿಗಳಲ್ಲಿ ಆಸಕ್ತಿ ತೋರಿದ ವಿದ್ಯಾರ್ಥಿಗಳನ್ನು ಈ ವಿಶೇಷ ಶಿಬಿರಕ್ಕೆ ಆಯ್ಕೆ ಮಾಡಲಾಗಿದೆ. ಮೇ 11ರಿಂದ 14ರವರೆಗೆ ಶಿಬಿರ ನಡೆಯಲಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಂ. ಗಂಗಾಧರ ರಾವ್ ವಹಿಸಿದ್ದರು. ಮುರಳಿ ಕಡೆಕಾರ್ ಕಾರ್ಯಕ್ರಮವನ್ನು ಸಂಯೋಜಿಸಿದರು. ನಾರಾಯಣ ಎಂ. ಹೆಗಡೆ ಹಾಗೂ ಪ್ರಸಾಧನ ತಜ್ಞ ಮಿಥುನ್ ನಾಯಕ್ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಯಕ್ಷಗಾನ ಕಲಾರಂಗಕ್ಕೆ ಭೇಟಿ ನೀಡಿದ ಗುರು ಬನ್ನಂಜೆ ಸಂಜೀವ ಸುವರ್ಣ ಅವರು ವಿದ್ಯಾರ್ಥಿಗಳಿಗೆ ಯಕ್ಷಗಾನದ ಮುಖವರ್ಣಿಕೆ ಮತ್ತು ವೇಷಭೂಷಣದ ಮಹತ್ವದ ಕುರಿತು ಮಾರ್ಗದರ್ಶನ ನೀಡಿದರು.