ಕಾರ್ಕಳ ಅಗ್ನಿಶಾಮಕ ದಳದ ಸಾಹಸಮಯ ಕಾರ್ಯಾಚರಣೆ: ಬಾವಿಯಲ್ಲಿ ಸಿಲುಕಿದ್ದ ಮೂವರ ರಕ್ಷಣೆ
Monday, May 11, 2026
ಕಾರ್ಕಳ ತಾಲೂಕಿನ ಕುಕ್ಕುಂದೂರು ಸಮೀಪದ ಅಶ್ವಥಪುರದಲ್ಲಿ ಬಾವಿಗೆ ಇಳಿದು ಮಣ್ಣು ತೆಗೆಯುತ್ತಿದ್ದ ವೇಳೆ ಸಂಕಷ್ಟಕ್ಕೆ ಸಿಲುಕಿದ್ದ ಮೂವರನ್ನು ಕಾರ್ಕಳ ಅಗ್ನಿಶಾಮಕ ದಳದ ಸಿಬ್ಬಂದಿ ಸಾಹಸಮಯ ಕಾರ್ಯಾಚರಣೆ ನಡೆಸಿ ರಕ್ಷಿಸಿದ್ದಾರೆ.
ರಾಜೇಶ್ (42), ಪವನ್ (29) ಹಾಗೂ ಗೋಪಾಲ್ ನಾಯ್ಕ (52) ಬಾವಿಯ ಮಣ್ಣು ತೆಗೆಯುವ ಕೆಲಸಕ್ಕಾಗಿ ಬಾವಿಗಿಳಿದಿದ್ದರು. ಈ ವೇಳೆ ಮೇಲಕ್ಕೆ ಬರುತ್ತಿದ್ದ ರಾಜೇಶ್ ಅವರು ಆಯತಪ್ಪಿ ಬಿದ್ದು ಗಾಯಗೊಂಡಿದ್ದಾರೆ ಎನ್ನಲಾಗಿದೆ.
ಅವರನ್ನು ರಕ್ಷಿಸಲು ಮುಂದಾದ ಪವನ್ ಹಾಗೂ ಗೋಪಾಲ್ ನಾಯ್ಕ ಕೂಡ ಬಾವಿಯೊಳಗೆ ಸಿಲುಕಿಕೊಂಡಿದ್ದರು. ವಿಷಯ ತಿಳಿಯುತ್ತಿದ್ದಂತೆ ಸ್ಥಳೀಯರು ಕಾರ್ಕಳ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ.
ತಕ್ಷಣ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಮೂವರನ್ನೂ ಸುರಕ್ಷಿತವಾಗಿ ಮೇಲಕ್ಕೆತ್ತುವಲ್ಲಿ ಯಶಸ್ವಿಯಾಗಿದ್ದಾರೆ. ಗಾಯಗೊಂಡಿದ್ದ ರಾಜೇಶ್ ಅವರನ್ನು ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.
