-->
ಕೊಡವೂರು ಮಹಾ ರುದ್ರ ಯಾಗದ ಪ್ರಯುಕ್ತ ವಸ್ತು ಪ್ರದರ್ಶನ ಮಳಿಗೆ ಉದ್ಘಾಟನೆ(Video)

ಕೊಡವೂರು ಮಹಾ ರುದ್ರ ಯಾಗದ ಪ್ರಯುಕ್ತ ವಸ್ತು ಪ್ರದರ್ಶನ ಮಳಿಗೆ ಉದ್ಘಾಟನೆ(Video)


ಕೊಡವೂರು ಶಂಕರನಾರಾಯಣ ದೇವಸ್ಥಾನದಲ್ಲಿ ಲೋಕ ಕಲ್ಯಾಣಾರ್ಥ ನಾಡಿನ ಜನರ ಸುಭೀಕ್ಷೆಗಾಗಿ ಮೇ 14ರಿಂದ 19ರವರೆಗೆ ಮಹಾ ರುದ್ರಯಾಗದ ಪ್ರಯುಕ್ತ ವಸ್ತು ಪ್ರದರ್ಶನ ಮಳಿಗೆ ಹಾಗೂ ಮನೋರಂಜನಾ ಆಟಗಳಿಗೆ ಭಾನುವಾರ ಸಂಜೆ ಚಾಲನೆ ನೀಡಲಾಯಿತು.


ಹಿರಿಯ ಕಾಂಗ್ರೆಸ್ ನಾಯಕಿ ಸರಳಾ ಬಿ ಕಾಂಚನ್ ರಿಬ್ಬನ್ ಕತ್ತರಿಸುವ ಮೂಲಕ ವಸ್ತು ಪ್ರದರ್ಶನ ಮಳಿಗೆ ಹಾಗೂ ಮನೋರಂಜನಾ ಆಟಗಳಿಗೆ ಚಾಲನೆ ನೀಡಿದರು. ಪ್ರತಿಭೆ ನಿಮ್ಮದು ವೇದಿಕೆ ನಮ್ಮದು ಪ್ರತಿಭಾ ಪ್ರದರ್ಶನಾ ಕಾರ್ಯಕ್ರಮ ವೇದಿಕೆಗೆ ಉಡುಪಿ ಜಿಲ್ಲಾ ಮಹಿಳಾ ಮಂಡಳಗಳ ಒಕ್ಕೂಟದ ಅಧ್ಯಕ್ಷರಾದ ವಾಸಂತಿ ರಾವ್ ಕೊರಡ್ಕಲ್ ಚಾಲನೆ ನೀಡಿದರು.


ಈ ವೇಳೆ ಮಾತನಾಡಿದ ಸರಳಾ ಬಿ ಕಾಂಚನ್, ತಮ್ಮ ಕುಟುಂಬ ಹಾಗೂ ಸಮಾಜದ ಎಲ್ಲರೂ ಜೊತೆಯಾಗಿ ಸೇರಿ ನಡೆಸಲು ಉದ್ದೇಶಿಸಿರುವ ಮಹಾ ರುದ್ರಯಾಗಕ್ಕೆ ಸರ್ವರೂ ಕೂಡ ಸಹಕಾರ ನೀಡುವಂತೆ ಮನವಿ ಮಾಡಿದರು.

ಉಡುಪಿ ಜಿಲ್ಲಾ ಮಹಿಳಾ ಮಂಡಳಗಳ ಒಕ್ಕೂಟದ ಅಧ್ಯಕ್ಷರಾದ ವಾಸಂತಿ ರಾವ್ ಕೊರಡ್ಕಲ್ ಮಾತನಾಡಿ ಲೋಕ ಕಲ್ಯಾಣಾರ್ಥ, ನಾಡಿನ ಜನರ ಸುಭೀಕ್ಷೆಗಾಗಿ ಆಯೋಜಿಸಲಾಗಿರುವ ಮಹಾರುದ್ರಯಾಗ ಸರ್ವರ ಸಹಕಾರದೊಂದಿಗೆ ಯಶಸ್ಸು ಕಾಣಲಿ ಎಂದು ಶುಭ ಹಾರೈಸಿದರು.


ಮಹಾ ರುದ್ರಯಾಗ ಸಮಿತಿಯ ಕಾರ್ಯಾಧ್ಯಕ್ಷ ಪ್ರಸಾದ್ ರಾಜ್ ಕಾಂಚನ್ ಮಹಾರುದ್ರ ಯಾಗವನ್ನು ನಾಡ ಹಬ್ಬದಂತೆ ಆಚರಿಸಲು ನಿರ್ಧರಿಸಿದ್ದೇವೆ. ವಿವಿಧ ಧಾರ್ಮಿಕ, ಮನರಂಜನೆ, ಕ್ರೀಡೋತ್ಸವ, ಆರೋಗ್ಯ ಶಿಬಿರ, ಉದ್ಯೋಗ ಮೇಳಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು. 

ಮೇ 10ರಿಂದ 20ರವರೆಗೆ ಮನರಂಜನೆಗಾಗಿ ಜಾಯಿಂಟ್ ವಿಲ್, ಬೃಹತ್ ವಸ್ತು ಪ್ರದರ್ಶನ ಏರ್ಪಡಿಸಲಾಗಿದೆ. 14ರಂದು ಮಲ್ಪೆಯಿಂದ ಕೊಡವೂರು ಮಹತೋಭಾರ ಶಂಕರನಾರಯಣ ದೇವಸ್ಥಾನದವರೆಗೆ ಹೊರೆಕಾಣಿಕೆ ಮೆರವಣಿಗೆ ನಡೆಯಲಿದೆ. 15 ರಂದು ಮಹಾರುದ್ರ ಯಾಗ, ಗಣ ಯಾಗ ಧಾರ್ಮಿಕ ವಿಧಿವಿಧಾನಗಳು ಆರಂಭಗೊಳ್ಳಲಿದೆ. ಅಂದು ಸಂಜೆ ಕಾರ್ಯಕ್ರಮ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ ನಡೆಯಲಿದೆ ಎಂದು ತಿಳಿಸಿದರು.

16ರಂದು ಉಚಿತ ಆರೋಗ್ಯ ಶಿಬಿರ ನಡೆಯಲಿದೆ. 17ರಂದು ಮಲ್ಪೆ ಬೀಚ್ನಲ್ಲಿ ವಿವಿಧ ಸಾಂಪ್ರದಾಯಿಕ ಕ್ರೀಡಾಕೂಟಗಳು ನಡೆಯಲಿದ್ದು, ಅಂದು ಸಂಜೆ 6ಗಂಟೆಗೆ ಮಲ್ಪೆ ಕಡಲ ತೀರದಲ್ಲಿ ವಾರಣಾಸಿಯ ಪುರೋಹಿತರಿಂದ ಗಂಗಾರತಿ ನೆರವೇರಲಿದೆ. ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭಾಗವಹಿಸಲಿದ್ದಾರೆ. ಅಂದು ರಾತ್ರಿ 8ಕ್ಕೆ ದಕ್ಷಿಣ ಗಾಯಕಿ ಮಂಗ್ಲಿ ಅವರಿಂದ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಲಿದೆ. 18ರಂದು ಬೃಹತ್ ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿದೆ ಎಂದರು.


ಈ ವೇಳೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ದಿನಕರ ಹೇರೂರು, ಮಾಜಿ ನಗರಸಭಾಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಕೊಡವೂರು ಶಂಕರನಾರಾಯಣ ದೇವಸ್ಥಾನದ ಅಧ್ಯಕ್ಷರಾದ ಪ್ರಕಾಶ್ ಜಿ ಕೊಡವೂರು, ಮಹಾರುದ್ರ ಯಾಗ ಸಮಿತಿಯ ಪ್ರಧಾನ ಸಂಚಾಲಕರಾದ ತಾರನಾಥ ಪೂಜಾರಿ, ಕೆ ಕೃಷ್ಣಮೂರ್ತಿ ಆಚಾರ್ಯ, ಸಂಚಾಲಕರಾದ ನಂದಕಿಶೋರ್ ಕೆಮ್ಮಣ್ಣು, ರಮೇಶ್ ತಿಂಗಳಾಯ, ಪದಾಧಿಕಾರಿಗಳಾದ ಡಾ. ವಿಜಯೇಂದ್ರ ವಸಂತ್, ಟಿ. ರಾಘವೇಂದ್ರ ರಾವ್ ಕೊಡವೂರು, ರಾಜ ಎ ಸೇರಿಗಾರ, ಪೀಟರ್ ಸಿಕ್ವೇರಾ, ರೂಫಸ್ ಸಿಕ್ವೇರಾ, ಹೇಮಾವತಿ ಸಾಲ್ಯಾನ್, ಕೇಶವ ಕೋಟ್ಯಾನ್ ಹಾಗೂ ಇತರರು ಉಪಸ್ಥಿತರಿದ್ದರು.

Ads on article

Advertise in articles 1

advertising articles 2

Advertise under the article