-->
ಆ. 21-23: 'ಸಮಾಧಾನ ಸಮಾರೋಹ 2026': ಸುಪ್ರೀಂಕೋರ್ಟ್ ನ ಬಾಕಿ ಪ್ರಕರಣಗಳಿಗೆ ರಾಜೀ ಪರಿಹಾರ

ಆ. 21-23: 'ಸಮಾಧಾನ ಸಮಾರೋಹ 2026': ಸುಪ್ರೀಂಕೋರ್ಟ್ ನ ಬಾಕಿ ಪ್ರಕರಣಗಳಿಗೆ ರಾಜೀ ಪರಿಹಾರ


ಸುಪ್ರೀಂ ಕೋರ್ಟ್‌ನಲ್ಲಿ ದೀರ್ಘಕಾಲದಿಂದ ಬಾಕಿ ಇರುವ ಪ್ರಕರಣಗಳನ್ನು ಸೌಹಾರ್ದಯುತವಾಗಿ ಮತ್ತು ಪರಸ್ಪರ ಒಪ್ಪಂದದ ಮೂಲಕ ಬಗೆಹರಿಸಿಕೊಳ್ಳಲು ಭಾರತದ ಸರ್ವೋಚ್ಚ ನ್ಯಾಯಾಲಯವು 'ಸಮಾಧಾನ ಸಮಾರೋಹ 2026' ಎಂಬ ವಿಶೇಷ ಲೋಕ ಅದಾಲತ್ ಅನ್ನು ಆಗಸ್ಟ್ 21, 22 ಮತ್ತು 23 ರಂದು ಆಯೋಜಿಸುತ್ತಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನಿತಿನ್ ರಾವ್ ತಿಳಿಸಿದ್ದಾರೆ.

ಉಡುಪಿ ಜಿಲ್ಲಾ ನ್ಯಾಯಾಲಯದ ಸಭಾಂಗಣದಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆಗೆ ಬಾಕಿ ಇರುವ ಉಡುಪಿ ಜಿಲ್ಲೆಯ 19 ಪ್ರಕರಣಗಳನ್ನು ಗುರುತಿಸಲಾಗಿದೆ. ಅದರಲ್ಲಿ ಈಗಾಗಲೇ 2 ಪ್ರಕರಣಗಳು ರಾಜೀಯಾಗಿವೆ ಎಂದರು. ಸುಪ್ರೀಂಕೋರ್ಟ್ ನಲ್ಲಿ ವಿಚಾರಣೆಗೆ ಬಾಕಿ ಇರುವ ಪ್ರಕರಣಗಳನ್ನು ಸಂಧಾನಕ್ಕಾಗಿ ಗುರುತಿಸಿ ಈ ವಿಶೇಷ ಲೋಕ ಅದಾಲತ್ ಆಯೋಜಿಸಲಾಗಿದೆ ಎಂದು ಹೇಳಿದರು. 

ಬ್ಯಾಂಕಿಂಗ್ ಮತ್ತು ವಿಮಾ ಸಂಬಂಧಿತ ಪ್ರಕರಣಗಳು, ನಾಗರಿಕ ಕಾನೂನು, ಮೋಟಾರು ಅಪಘಾತ ಪರಿಹಾರ ಪ್ರಕರಣಗಳು, ಗ್ರಾಹಕ ವ್ಯಾಜ್ಯಗಳು ಮತ್ತು ರೈತ ಸಮಸ್ಯೆ, ಕ್ರಿಮಿನಲ್ ಪ್ರಕರಣಗಳು, ಕೌಟುಂಬಿಕ ವಿವಾದಗಳು, ಕಾರ್ಮಿಕ ಮತ್ತು ಕೈಗಾರಿಕಾ ಕಾನೂನುಗಳು ವಿವಾದಗಳು, ಭೂಸ್ವಾಧೀನ ಮತ್ತು ಪುನರ್ವಸತಿ, ಆಸ್ತಿ ತೆರಿಗೆ, ಬಾಡಿಗೆ ನಿಯಂತ್ರಣ ಮತ್ತು ಸಾರ್ವಜನಿಕ ಆವರಣ (ತೆರವುಗೊಳಿಸುವಿಕೆ) ಕಾಯ್ದೆ, ವರ್ಗಾವಣೆ ಅರ್ಜಿಗಳು ಮತ್ತು ಸೇವಾ ಕಾನೂನುಗಳಿಗೆ ಸಂಬಂಧಿಸಿದ ಪ್ರಕರಣಗಳನ್ನು ಇತ್ಯರ್ಥಕ್ಕೆ ಗುರುತಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಈ ವಿಶೇಷ ಲೋಕ ಅದಾಲತ್ ಜನಸಾಮಾನ್ಯರಿಗೆ ತಮ್ಮ ಕಾನೂನು ಹೋರಾಟವನ್ನು ತ್ವರಿತವಾಗಿ ಮತ್ತು ಕಡಿಮೆ ವೆಚ್ಚದಲ್ಲಿ ಮುಗಿಸಿಕೊಳ್ಳಲು ಸಿಕ್ಕಿರುವ ಮಹತ್ವದ ಅವಕಾಶವಾಗಿದೆ. ಇದರಿಂದ ಸಮಯ ಮತ್ತು ಹಣ ಉಳಿತಾಯವಾಗುವುದಲ್ಲದೆ, ಉಭಯ ಪಕ್ಷಗಳ ನಡುವೆ ಸೌಹಾರ್ದ ಸಂಬಂಧ ಉಳಿಯಲು ಸಹಕಾರಿಯಾಗಲಿದೆ ಎಂದರು. 

ಸುದ್ದಿಗೋಷ್ಟಿಯಲ್ಲಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾದೀಶರಾದ ಕಿರಣ್ ಎಸ್.ಗಂಗಣ್ಣವರ್ ಉಪಸ್ಥಿತರಿದ್ದರು.


Ads on article

Advertise in articles 1

advertising articles 2

Advertise under the article