ಪೆರ್ಡೂರು ಪದ್ಮಕಮಲ ಸಂಜೀವಿನಿ ಒಕ್ಕೂಟದಲ್ಲಿ 23 ಲಕ್ಷ ರೂ. ವಂಚನೆ
ಪೆರ್ಡೂರು ಪದ್ಮಕಮಲ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ಶಕ್ತಿ ಸಂಘದ ಲಕ್ಷಾಂತರ ರೂಪಾಯಿ ಹಣವನ್ನು ದುರುಪಯೋಗಪಡಿಸಿ ವಂಚಿಸಿರುವ ಆರೋಪದಡಿ ಸಂಘದ ಮುಖ್ಯ ಬರಹಗಾರರ ವಿರುದ್ಧ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂಘದ ಮುಖ್ಯ ಬರಹಗಾರರಾಗಿರುವ ಸುಗಂಧಿ ಅವರು 2023ರಿಂದ 2025ರ ಡಿಸೆಂಬರ್ ತಿಂಗಳ ನಡುವಿನ ಅವಧಿಯಲ್ಲಿ ವಿವಿಧ ಶ್ರೀಶಕ್ತಿ ಸಂಘಗಳ ಸದಸ್ಯರಿಗೆ ನೀಡಲಾಗಿದ್ದ ಸಾಲ ಹಾಗೂ ಸದಸ್ಯರು ಮರುಪಾವತಿಸಿದ ಹಣವನ್ನು ಸಂಘದ ಜಮಾ ಪುಸ್ತಕದಲ್ಲಿ ಸಂಬಂಧಿತ ಖಾತೆಗಳಿಗೆ ದಾಖಲಿಸದೆ ತಮ್ಮ ಸ್ವಂತ ಬಳಕೆಗೆ ಬಳಸಿಕೊಂಡಿರುವ ಆರೋಪ ಕೇಳಿಬಂದಿದೆ.
ಇದಲ್ಲದೆ, ಕೆಲ ಸದಸ್ಯರ ಸಾಲದ ಬೇಡಿಕೆ ಮೊತ್ತಕ್ಕಿಂತ ಹೆಚ್ಚಿನ ಮೊತ್ತವನ್ನು ದಾಖಲಿಸಿ, ಅಧ್ಯಕ್ಷರು ಹಾಗೂ ಕಾರ್ಯದರ್ಶಿಯವರ ನಕಲಿ ಸಹಿಗಳನ್ನು ಮಾಡಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಬ್ಯಾಂಕಿಗೆ ಸಲ್ಲಿಸಿ ಸಾಲ ಮಂಜೂರು ಮಾಡಿಸಿಕೊಂಡಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಸಾಲ ಮಂಜೂರಾದ ಬಳಿಕ ಸದಸ್ಯರಿಗೆ ಅವರ ಬೇಡಿಕೆಯಷ್ಟು ಮಾತ್ರ ಹಣ ನೀಡಿ, ಉಳಿದ ಮೊತ್ತವನ್ನು ಸ್ವಂತಕ್ಕೆ ಬಳಸಿಕೊಂಡಿದ್ದಾರೆ ಎನ್ನಲಾಗಿದೆ. ಅಲ್ಲದೆ, ಕಾರ್ಯಕಾರಿ ಸಮಿತಿಗೆ ತೋರಿಸಲು ಪ್ರತ್ಯೇಕ ಪುಸ್ತಕ ಹಾಗೂ ನೈಜ ವ್ಯವಹಾರಗಳಿಗೆ ಮತ್ತೊಂದು ಪ್ರತ್ಯೇಕ ಪುಸ್ತಕವನ್ನು ನಿರ್ವಹಿಸುತ್ತಾ ಅಕ್ರಮ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ.
ಈ ರೀತಿಯಾಗಿ ವಿವಿಧ ಸಂಘಗಳಲ್ಲಿ ಒಟ್ಟು 23 ರೂ. ಲಕ್ಷ ಹಣವನ್ನು ದುರುಪಯೋಗಪಡಿಸಿ ವಂಚಿಸಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಹಿರಿಯಡ್ಕ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.