ಅಮೇರಿಕಾ - ಇರಾನ್ ಮಧ್ಯೆ ಯುದ್ಧ ಅಂತ್ಯ!
ಅಮೆರಿಕ ಹಾಗೂ ಇರಾನ್ ಮಧ್ಯೆ 107 ದಿನಗಳಿಂದ ನಡೆಯುತ್ತಿದ್ದ ಯುದ್ಧ ಕೊನೆಗೂ ಅಂತ್ಯ ಕಂಡಿದೆ. ಎರಡೂ ದೇಶಗಳು ಯುದ್ಧ ನಿಲ್ಲಿಸಲು ಒಪ್ಪಿಕೊಂಡಿದ್ದು, ಶಾಂತಿ ಒಪ್ಪಂದವನ್ನು ಅಂತಿಮಗೊಳಿಸಿರುವುದಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ.
ಈ ಕುರಿತು ಜೂನ್ 19 ರಂದು ಔಪಚಾರಿಕ ಶಾಂತಿ ಒಪ್ಪಂದಕ್ಕೆ ಸ್ವಿಟ್ಜರ್ಲೆಂಡ್‌ನಲ್ಲಿ ಸಹಿ ಹಾಕಲು ನಿರ್ಧರಿಸಲಾಗಿದೆ.
ಇದರೊಂದಿಗೆ ಹಾರ್ಮುಜ್ ಜಲಸಂಧಿ ಶೀಘ್ರದಲ್ಲೆ ತೆರೆಯುವ ಆಶಾವಾದ ವ್ಯಕ್ತವಾಗಿದೆ. ತಮ್ಮ 80ನೇ ಹುಟ್ಟು ಹಬ್ಬದ ದಿನದಂದು ಟ್ರೂತ್ ಸೋಶಿಯಲ್‌ನಲ್ಲಿ ಟ್ರಂಪ್ ಪೋಸ್ಟ್ ಮಾಡಿದ್ದು, "ಇರಾನ್ ಇಸ್ಲಾಮಿಕ್ ಗಣರಾಜ್ಯದೊಂದಿಗಿನ ಒಪ್ಪಂದವು ಈಗ ಅಂತಿಮಗೊಂಡಿದೆ. ಎಲ್ಲರಿಗೂ ಅಭಿನಂದನೆಗಳು" ಎಂದು ಘೋಷಿಸಿದ್ದಾರೆ.
ಹಾರ್ಮುಜ್ ಜಲಸಂಧಿ ಮತ್ತೆ ತೆರೆಯಲು ಮತ್ತು ಇರಾನ್ ಬಂದರುಗಳ ಮೇಲಿನ ಅಮೆರಿಕ ನೌಕಾ ದಿಗ್ಬಂಧನ ಕೊನೆಗೊಳಿಸಲು ಈ ಒಪ್ಪಂದ ನೆರವಾಗುತ್ತದೆ ಎಂದೂ ಅವರು ಹೇಳಿದ್ದಾರೆ. ಹಾರ್ಮುಜ್ ಜಲಸಂಧಿಯನ್ನು ಟೋಲ್-ಫ್ರೀ ಆಗಿ ತೆರೆಯಲು ಸಂಪೂರ್ಣವಾಗಿ ಅಧಿಕಾರ ನೀಡುತ್ತೇನೆ. ಇದೇ ವೇಳೆ ಯುನೈಟೆಡ್ ಸ್ಟೇಟ್ಸ್ ನೌಕಾ ದಿಗ್ಬಂಧನವನ್ನು ತಕ್ಷಣ ತೆಗೆದುಹಾಕಲು ಅಧಿಕಾರ ನೀಡುತ್ತೇನೆ. ವಿಶ್ವದ ಹಡಗುಗಳೇ, ನಿಮ್ಮ ಎಂಜಿನ್‌ಗಳನ್ನು ಪ್ರಾರಂಭಿಸಿ. ತೈಲ ಹರಿಯಲು ಬಿಡಿ!" ಎಂದು ಅವರು ಬರೆದುಕೊಂಡಿದ್ದಾರೆ.
ನಂತರದ ಮತ್ತೊಂದು ಪೋಸ್ಟ್‌ನಲ್ಲಿ, ಒಪ್ಪಂದಕ್ಕೆ ಅಧಿಕೃತವಾಗಿ ಸಹಿ ಹಾಕಿದ ನಂತರ ಶುಕ್ರವಾರ ಹಾರ್ಮುಜ್ ಜಲಸಂಧಿಯನ್ನು ಮತ್ತೆ ತೆರೆಯಲಾಗುವುದು ಎಂದು ಅಮೆರಿಕ ಅಧ್ಯಕ್ಷರು ಸ್ಪಷ್ಟಪಡಿಸಿದ್ದಾರೆ.
ವಾಷಿಂಗ್ಟನ್ ಮತ್ತು ಟೆಹ್ರಾನ್ ನಡುವಿನ ಒಂದು ವಾರದ ತೀವ್ರ ರಾಜತಾಂತ್ರಿಕ ಮಾತುಕತೆಗಳ ಬಳಿಕ ಈ ಬೆಳವಣಿಗೆಯಾಗಿದೆ. ಈ ಒಪ್ಪಂದವನ್ನು ಮಹಾನ್ ಸಾಧನೆ ಎಂದು ಟ್ರಂಪ್ ಹೇಳಿದ್ದು, ಇದರಿಂದ ಮಧ್ಯ ಪ್ರಾಚ್ಯದಲ್ಲಿ ಪರಿಸ್ಥಿತಿ ಶಾಂತಗೊಳ್ಳಲಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.