ಉಡುಪಿಯಲ್ಲಿ ಪೊಲೀಸ್ ನೇಮಕಾತಿ ಮಾಹಿತಿ ಕಾರ್ಯಾಗಾರ: ಅರ್ಜಿ, ಪರೀಕ್ಷಾ ವಿಧಾನದ ಕುರಿತು ಮಾರ್ಗದರ್ಶನ
ಉಡುಪಿ ನಗರ ಠಾಣೆಯ ಪ್ರಭಾರ ನಿರೀಕ್ಷಕ ಮಹೇಶ್ ಪ್ರಸಾದ್ ಅವರ ಮಾರ್ಗದರ್ಶನದಲ್ಲಿ, ಪೊಲೀಸ್ ಇಲಾಖೆಯ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ವಿಧಾನ ಹಾಗೂ ನೇಮಕಾತಿ ಪರೀಕ್ಷೆಯ ಕುರಿತು ಮಾಹಿತಿ ನೀಡುವ ಕಾರ್ಯಾಗಾರವು ಉಡುಪಿಯ ಬೀಡಿನಗುಡ್ಡೆಯ ಸೈಂಟ್ ಫ್ರಾನ್ಸಿಸ್ ಐಟಿಐ ಕಾಲೇಜಿನಲ್ಲಿ ನಡೆಯಿತು.
ಕಾರ್ಯಾಗಾರವನ್ನು ಉಡುಪಿ ನಗರ ಠಾಣೆಯ ಉಪ ನಿರೀಕ್ಷಕ ಈರಣ್ಣ ಶಿರಗುಂಪಿ ನಡೆಸಿಕೊಟ್ಟು, ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ವಿಧಾನ, ಲಿಖಿತ ಪರೀಕ್ಷೆ, ದೈಹಿಕ ಪರೀಕ್ಷೆ ಹಾಗೂ ಆಯ್ಕೆ ಪ್ರಕ್ರಿಯೆ ಕುರಿತು ವಿದ್ಯಾರ್ಥಿಗಳಿಗೆ ಸಮಗ್ರ ಮಾಹಿತಿ ನೀಡಿದರು. ಪೊಲೀಸ್ ಇಲಾಖೆಯಲ್ಲಿನ ಉದ್ಯೋಗಾವಕಾಶಗಳು, ಸೇವೆಯ ಮಹತ್ವ ಹಾಗೂ ವೃತ್ತಿಜೀವನದ ಬೆಳವಣಿಗೆ ಕುರಿತೂ ಅವರು ವಿವರಿಸಿದರು.
ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಕರ್ನಾಟಕದ ವಿವಿಧ ಭಾಗಗಳ ಯುವಕರು ಪೊಲೀಸ್ ಇಲಾಖೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, ಉಡುಪಿ ಜಿಲ್ಲೆಯ ಪ್ರತಿನಿಧಿತ್ವ ಮಾತ್ರ ಕಡಿಮೆಯಾಗಿದೆ ಎಂದು ತಿಳಿಸಿದರು. ಉಡುಪಿ ಭಾಗದ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಪ್ರತಿಭಾವಂತರಾಗಿದ್ದು, ಪೊಲೀಸ್ ಇಲಾಖೆಯಲ್ಲಿನ ಉದ್ಯೋಗಾವಕಾಶಗಳನ್ನು ಸದ್ಬಳಕೆ ಮಾಡಿಕೊಂಡು ಹೆಚ್ಚಿನ ಸಂಖ್ಯೆಯಲ್ಲಿ ಸೇವೆಗೆ ಸೇರ್ಪಡೆಯಾಗಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಅಜಯ್ ನೊರೋನ್ಹಾ ಅಧ್ಯಕ್ಷತೆ ವಹಿಸಿ ಸ್ವಾಗತಿಸಿದರು. ಹಿರಿಯ ಶಿಕ್ಷಕ ಡೊಮಿನಿಕ್ ಆಂಡ್ರ್ಯೂ ಮೊಂಥೆರೋ ವಂದಿಸಿದರು. ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಾಗಾರದ ಪ್ರಯೋಜನ ಪಡೆದುಕೊಂಡರು.