-->
 ಚಲಿಸುತ್ತಿದ್ದ ಬಸ್ಸಿನಲ್ಲಿ ಚಾಲಕನಿಗೆ ಬಿಪಿ ಲೋ: ಡಿವೈಡರ್ ಮೇಲೇರಿದ ಬಸ್

ಚಲಿಸುತ್ತಿದ್ದ ಬಸ್ಸಿನಲ್ಲಿ ಚಾಲಕನಿಗೆ ಬಿಪಿ ಲೋ: ಡಿವೈಡರ್ ಮೇಲೇರಿದ ಬಸ್


ಚಲಿಸುತ್ತಿದ್ದ ಬಸ್ಸಿನಲ್ಲಿ ಚಾಲಕನಿಗೆ ರಕ್ತದೊತ್ತಡ ಕಡಿಮೆಯಾದ ಪರಿಣಾಮ, ನಿಯಂತ್ರಣ ತಪ್ಪಿದ ಖಾಸಗಿ ಬಸ್ ರಸ್ತೆ ಮಧ್ಯದ ಡಿವೈಡರ್ ಏರಿ ನಿಂತ ಘಟನೆ ಮಂಗಳವಾರ ಬೆಳಗ್ಗೆ ದೇರಳಕಟ್ಟೆಯ ಯೆನೆಪೋಯ ಆಸ್ಪತ್ರೆ ಮುಂಭಾಗದಲ್ಲಿ ನಡೆದಿದೆ. ಅದೃಷ್ಟವಶಾತ್ ಬಸ್ಸಿನಲ್ಲಿದ್ದ ಪ್ರಯಾಣಿಕರು ಯಾವುದೇ ಪ್ರಾಣಾಪಾಯವಿಲ್ಲದೆ ಪಾರಾಗಿದ್ದಾರೆ.

ಮುಡಿಪು–ಸ್ಟೇಟ್ ಬ್ಯಾಂಕ್ ಮಾರ್ಗದಲ್ಲಿ ಸಂಚರಿಸುವ ‘ಗೋಪಾಲಕೃಷ್ಣ’ ಹೆಸರಿನ ಖಾಸಗಿ ಸರ್ವಿಸ್ ಬಸ್ ಮುಡಿಪುವಿನಿಂದ ದೇರಳಕಟ್ಟೆ ತಲುಪಿದ ವೇಳೆ ಈ ಘಟನೆ ಸಂಭವಿಸಿದೆ. ಬಸ್ ಚಾಲಕ ಜನಾರ್ಧನ್ ಅವರಿಗೆ ಹಠಾತ್ ಬಿಪಿ ಲೋ ಆದ ಪರಿಣಾಮ ಅವರು ಸ್ಟೇರಿಂಗ್ ಮೇಲೆಯೇ ಕುಸಿದಿದ್ದಾರೆ ಎಂದು ತಿಳಿದುಬಂದಿದೆ. ಇದರಿಂದ ನಿಯಂತ್ರಣ ತಪ್ಪಿದ ಬಸ್ ರಸ್ತೆ ಮಧ್ಯದ ಡಿವೈಡರ್ ಏರಿ ನಿಂತಿದೆ.

ಘಟನೆಯ ವೇಳೆ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದವರಿಗೆ ಯಾವುದೇ ಗಾಯಗಳಾಗಿಲ್ಲ. ಬಸ್ ಡಿವೈಡರ್ ಏರಿ ನಿಂತಿದ್ದರೂ ಎದುರು ಅಥವಾ ಪಕ್ಕದಲ್ಲಿ ಯಾವುದೇ ವಾಹನಗಳು ಇಲ್ಲದ ಕಾರಣ ಸಂಭವಿಸಬಹುದಾಗಿದ್ದ ದೊಡ್ಡ ಅನಾಹುತ ತಪ್ಪಿದೆ.

ಸ್ಥಳೀಯರ ಪ್ರಕಾರ, ಯೆನೆಪೋಯ ಆಸ್ಪತ್ರೆ ಮುಂಭಾಗದ ರಸ್ತೆಯಲ್ಲಿ ಕೆಲವು ವಾಹನ ಚಾಲಕರು ದಿನನಿತ್ಯವೂ ವಿರುದ್ಧ ದಿಕ್ಕಿನಲ್ಲಿ ಸಂಚರಿಸಿ ಯೂ-ಟರ್ನ್ ಪಡೆಯುವ ಘಟನೆಗಳು ನಡೆಯುತ್ತಿರುತ್ತವೆ. ಆದರೆ ಈ ಸಂದರ್ಭದಲ್ಲಿ ಬಸ್ಸಿನ ಮಾರ್ಗದಲ್ಲಿ ಯಾವುದೇ ವಾಹನಗಳು ಅಡ್ಡಬರದಿದ್ದುದರಿಂದ ಅಪಘಾತದ ತೀವ್ರತೆ ತಪ್ಪಿದಂತಾಗಿದೆ.

ಗಂಭೀರ ಸ್ಥಿತಿಯಲ್ಲಿದ್ದ ಚಾಲಕ ಜನಾರ್ಧನ್ ಅವರನ್ನು ತಕ್ಷಣ ಸಮೀಪದ ಯೆನೆಪೋಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ಚಿಕಿತ್ಸೆಯ ಬಳಿಕ ಅವರ ಆರೋಗ್ಯ ಸ್ಥಿತಿ ಸುಧಾರಿಸಿದ್ದು, ಅವರು ಚೇತರಿಸಿಕೊಂಡಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಮಂಗಳೂರು ದಕ್ಷಿಣ ಸಂಚಾರಿ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಘಟನೆಯ ಕುರಿತು ಹೆಚ್ಚಿನ ಮಾಹಿತಿ ಸಂಗ್ರಹಿಸುತ್ತಿದ್ದಾರೆ.  

Ads on article

Advertise in articles 1

advertising articles 2

Advertise under the article