ಮೂಡಬಿದ್ರೆ: ಜಾರ್ಖಂಡ್ ಮೂಲದ ಮಹಿಳೆ ನಾಪತ್ತೆ: ದೂರು ದಾಖಲು
ಜಾರ್ಖಂಡ್ ಮೂಲದ ಮಹಿಳೆಯೊಬ್ಬರು ದರೆಗುಡ್ಡೆ ಸಮೀಪದ ಕಕ್ಕೆಕಾಡು ಪ್ರದೇಶದ ಮನೆಯಿಂದ ನಾಪತ್ತೆಯಾಗಿದ್ದು, ಈ ಬಗೆ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ನಾಪತ್ತೆಯಾದ ಮಹಿಳೆಯನ್ನು ಕರ್ಮೇಲಾ ಸೋರೆನ್ (48) ಎಂದು ಗುರುತಿಸಲಾಗಿದೆ. ಕಳೆದ ಎರಡು ವರ್ಷಗಳಿಂದ ಆನೆಗುಡ್ಡೆ ಮತ್ತು ದರೆಗುಡ್ಡೆ ನಡುವಿನ ಕಕ್ಕೆಕಾಡು ನಿವಾಸಿಯೊಬ್ಬರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಅವರು, ಜೂನ್ 9ರಂದು ಮಧ್ಯಾಹ್ನ ಸುಮಾರು 12.30 ಗಂಟೆಗೆ ಯಾರಿಗೂ ತಿಳಿಸದೆ ಮನೆಯಿಂದ ಹೊರಟಿದ್ದಾರೆ ಎನ್ನಲಾಗಿದೆ.
ಮನೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ವೇಳೆ, ಮಹಿಳೆ ನಡೆದುಕೊಂಡು ದರೆಗುಡ್ಡೆ ರಸ್ತೆಯ ಮೂಲಕ ತೆರಳುತ್ತಿರುವುದು ದಾಖಲಾಗಿರುವುದು ತಿಳಿದುಬಂದಿದೆ. ಬಳಿಕ ಮಧ್ಯಾಹ್ನ ಸುಮಾರು 2.30 ಗಂಟೆಗೆ ಅವರು ಖಾಸಗಿ ಬಸ್ ಹತ್ತಿರುವುದು ದೃಢಪಟ್ಟಿದೆ.
ಬಸ್ ನಿರ್ವಾಹಕರು ನೀಡಿದ ಮಾಹಿತಿಯ ಪ್ರಕಾರ, ಕರ್ಮೇಲಾ ಸೋರೆನ್ ಮಧ್ಯಾಹ್ನ ಸುಮಾರು 2.45 ಗಂಟೆಗೆ ಮೂಡುಬಿದಿರೆ ಬಸ್ ನಿಲ್ದಾಣದಲ್ಲಿ ಇಳಿದಿದ್ದಾರೆ. ಬಸ್‌ನಲ್ಲಿ ಟಿಕೆಟ್ ಕೇಳಿದಾಗ ಅವರು ಸಮರ್ಪಕವಾಗಿ ಪ್ರತಿಕ್ರಿಯಿಸಿರಲಿಲ್ಲ ಹಾಗೂ ಮಾನಸಿಕವಾಗಿ ಸ್ವಲ್ಪ ಅಸ್ವಸ್ಥಗೊಂಡಂತೆ ಕಂಡುಬಂದಿದ್ದರು ಎಂದು ನಿರ್ವಾಹಕರು ತಿಳಿಸಿದ್ದಾರೆ.
ಘಟನೆಯ ಕುರಿತು ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನಾಪತ್ತೆಯಾದ ಮಹಿಳೆಯ ಪತ್ತೆಗಾಗಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಮಹಿಳೆಯ ಕುರಿತು ಯಾವುದೇ ಮಾಹಿತಿ ದೊರೆತಲ್ಲಿ ಸಮೀಪದ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಲಾಗಿದೆ.