-->
ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಮೊದಲ ಜೆಂಡರ್ ಅಫರ್ಮಿಂಗ್ ಶಸ್ತ್ರಚಿಕಿತ್ಸೆ ಯಶಸ್ವಿ

ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಮೊದಲ ಜೆಂಡರ್ ಅಫರ್ಮಿಂಗ್ ಶಸ್ತ್ರಚಿಕಿತ್ಸೆ ಯಶಸ್ವಿ


ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆ ತನ್ನ ಮೊದಲ ಸಂಪೂರ್ಣ ಜೆಂಡರ್ ಅಫರ್ಮಿಂಗ್ (ಲಿಂಗ ದೃಢೀಕರಣ) ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನೆರವೇರಿಸಿದ್ದು, ಟ್ರಾನ್ಸ್‌ಜೆಂಡರ್ ಮಹಿಳೆಯೊಬ್ಬರಿಗೆ ಜೂನ್ 10ರಂದು ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ಪೂರ್ಣಗೊಂಡಿದ್ದು, ರೋಗಿ ಆಸ್ಪತ್ರೆಯ ವೈದ್ಯಕೀಯ ತಂಡದ ಆರೈಕೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ.

ಆಸ್ಪತ್ರೆಯ ಪ್ಲಾಸ್ಟಿಕ್ ಸರ್ಜರಿ ವಿಭಾಗವು ಈ ಹಿಂದಿನಿಂದಲೇ ಮುಖದ ಸ್ತ್ರೀಕರಣ ಹಾಗೂ ಸ್ತನ ವರ್ಧನೆ ಸೇರಿದಂತೆ ಹಲವು ಲಿಂಗ ದೃಢೀಕರಣ ಚಿಕಿತ್ಸಾ ವಿಧಾನಗಳನ್ನು ನಡೆಸುತ್ತಿದ್ದು, ಸಂಪೂರ್ಣ ಜನನಾಂಗ ಲಿಂಗ ದೃಢೀಕರಣ ಶಸ್ತ್ರಚಿಕಿತ್ಸೆಯನ್ನು ನಡೆಸಿರುವುದು ಇದೇ ಮೊದಲ ಬಾರಿಯಾಗಿದೆ. ಈ ಸೇವೆಯನ್ನು ಮುಂದಿನ ದಿನಗಳಲ್ಲಿ ಮತ್ತಷ್ಟು ವಿಸ್ತರಿಸುವ ಉದ್ದೇಶವನ್ನು ಆಸ್ಪತ್ರೆ ವ್ಯಕ್ತಪಡಿಸಿದೆ.

ವೈದ್ಯಕೀಯ ತಜ್ಞರ ಪ್ರಕಾರ, ಲಿಂಗ ಡಿಸ್ಫೋರಿಯಾ (Gender Dysphoria) ಸಮಸ್ಯೆಯಿಂದ ಬಳಲುವ ಅನೇಕ ಟ್ರಾನ್ಸ್‌ಜೆಂಡರ್ ವ್ಯಕ್ತಿಗಳು ತಮ್ಮ ದೈಹಿಕ ಗುರುತು ಮತ್ತು ಮಾನಸಿಕ ಲಿಂಗ ಗುರುತಿನ ನಡುವೆ ವ್ಯತ್ಯಾಸ ಅನುಭವಿಸುತ್ತಾರೆ. ಇಂತಹ ಸಂದರ್ಭಗಳಲ್ಲಿ ಲಿಂಗ ದೃಢೀಕರಣ ಶಸ್ತ್ರಚಿಕಿತ್ಸೆ ಅವರ ಆತ್ಮವಿಶ್ವಾಸ ಹಾಗೂ ಜೀವನಮಟ್ಟವನ್ನು ಸುಧಾರಿಸಲು ಸಹಕಾರಿಯಾಗುತ್ತದೆ.

ಶಸ್ತ್ರಚಿಕಿತ್ಸೆಗೆ ಪ್ಲಾಸ್ಟಿಕ್ ಸರ್ಜರಿ ವಿಭಾಗದ ಮುಖ್ಯಸ್ಥ ಡಾ. ಜೋಸೆಫ್ ಥಾಮಸ್, ಸಹ ಪ್ರಾಧ್ಯಾಪಕ ಡಾ. ಹರ್ಷವರ್ಧನ್ ಶೆಟ್ಟಿ ಹಾಗೂ ಮೂತ್ರಶಾಸ್ತ್ರ ವಿಭಾಗದ ಡಾ. ಅನುಪಮ್ ಚೌಧರಿ ನೇತೃತ್ವ ವಹಿಸಿದ್ದರು. ಹಲವು ಗಂಟೆಗಳ ಕಾಲ ನಡೆದ ಈ ಶಸ್ತ್ರಚಿಕಿತ್ಸೆ ಎರಡೂ ವಿಭಾಗಗಳ ಸಮನ್ವಯದಿಂದ ಯಶಸ್ವಿಯಾಗಿ ಪೂರ್ಣಗೊಂಡಿತು.

“ಈ ಶಸ್ತ್ರಚಿಕಿತ್ಸೆಗಾಗಿ ಬರುವ ಅನೇಕ ರೋಗಿಗಳು ತಮ್ಮ ದೇಹದಲ್ಲಿ ಹಾಯಾಗಿರಲು ಹಲವು ವರ್ಷಗಳ ಕಾಲ ಕಾಯುತ್ತಾರೆ. ಶಸ್ತ್ರಚಿಕಿತ್ಸೆಯ ಜೊತೆಗೆ ರೋಗಿಗಳಿಗೆ ಮಾನಸಿಕ ಹಾಗೂ ಭಾವನಾತ್ಮಕ ಬೆಂಬಲ ನೀಡುವುದೂ ಅಷ್ಟೇ ಮುಖ್ಯವಾಗಿದೆ,” ಎಂದು ಡಾ. ಜೋಸೆಫ್ ಥಾಮಸ್ ತಿಳಿಸಿದ್ದಾರೆ.

ಮಾಹೆ ಬೋಧನಾ ಆಸ್ಪತ್ರೆಗಳ ಮುಖ್ಯ ನಿರ್ವಹಣಾಧಿಕಾರಿ ಡಾ. ಸುಧಾಕರ್ ಕಂಟಿಪುಡಿ ಮಾತನಾಡಿ, “ಶಸ್ತ್ರಚಿಕಿತ್ಸೆ ರೋಗಿಯ ಆರೈಕೆ ಪ್ರಯಾಣದ ಒಂದು ಹಂತ ಮಾತ್ರ. ಚಿಕಿತ್ಸೆ ಬಳಿಕವೂ ಗೌಪ್ಯತೆ, ಸಮಾಲೋಚನೆ, ಬೆಂಬಲ ಹಾಗೂ ಸುರಕ್ಷಿತ ವಾತಾವರಣ ಒದಗಿಸುವುದು ಅತ್ಯಗತ್ಯ. ಟ್ರಾನ್ಸ್‌ಜೆಂಡರ್ ಸಮುದಾಯದವರು ಗೌರವಯುತ ಹಾಗೂ ಸುರಕ್ಷಿತ ಆರೋಗ್ಯ ಸೇವೆ ಪಡೆಯಲು ಈ ಸೇವೆ ನೆರವಾಗಲಿದೆ,” ಎಂದು ಹೇಳಿದರು.

ಆಸ್ಪತ್ರೆಯು ಫಾಲೋ-ಅಪ್ ಭೇಟಿಗಳು, ಅಗತ್ಯವಿದ್ದರೆ ಫಿಸಿಯೋಥೆರಪಿ ಹಾಗೂ ನಿಯಮಿತ ಸಮಾಲೋಚನೆಗಳನ್ನು ಒಳಗೊಂಡ ಸಮಗ್ರ ಚೇತರಿಕೆ ಯೋಜನೆಯನ್ನು ಜಾರಿಗೊಳಿಸಿದ್ದು, ರೋಗಿಯ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೂ ನಿರಂತರ ನಿಗಾ ವಹಿಸಲಾಗುತ್ತಿದೆ.

ಈ ಸಾಧನೆಯ ಮೂಲಕ ಕಸ್ತೂರ್ಬಾ ಆಸ್ಪತ್ರೆ ಟ್ರಾನ್ಸ್‌ಜೆಂಡರ್ ಸಮುದಾಯ ಸೇರಿದಂತೆ ಎಲ್ಲರಿಗೂ ಸಮಾನ, ಗೌರವಯುತ ಹಾಗೂ ಸುಲಭವಾಗಿ ಲಭ್ಯವಾಗುವ ಆರೋಗ್ಯ ಸೇವೆಗಳನ್ನು ಒದಗಿಸುವ ತನ್ನ ಬದ್ಧತೆಯನ್ನು ಮತ್ತೊಮ್ಮೆ ದೃಢಪಡಿಸಿದೆ. ಆಸ್ಪತ್ರೆಯು ಮುಂದಿನ ದಿನಗಳಲ್ಲಿ ಈ ಸೇವೆಯನ್ನು ಮತ್ತಷ್ಟು ವಿಸ್ತರಿಸಿ, ಪ್ರದೇಶದ ಹೆಚ್ಚಿನ ರೋಗಿಗಳಿಗೆ ತಮ್ಮ ಮನೆ ಸಮೀಪದಲ್ಲಿಯೇ ಲಿಂಗ ದೃಢೀಕರಣ ಚಿಕಿತ್ಸೆಯನ್ನು ಲಭ್ಯವಾಗುವಂತೆ ಮಾಡುವ ಗುರಿಯನ್ನು ಹೊಂದಿದೆ.

Ads on article

Advertise in articles 1

advertising articles 2

Advertise under the article