-->
 ಉಡುಪಿ ಜಿಲ್ಲೆಯ ಮೂವರು ರೌಡಿಶೀಟರ್‌ಗಳ ಗಡಿಪಾರು

ಉಡುಪಿ ಜಿಲ್ಲೆಯ ಮೂವರು ರೌಡಿಶೀಟರ್‌ಗಳ ಗಡಿಪಾರು


ಉಡುಪಿ ಜಿಲ್ಲೆಯ ಮೂವರು ರೌಡಿಶೀಟರ್‌ಗಳ ವಿರುದ್ಧ ವಿಶೇಷ ಕಾರ್ಯಾಂಗ ದಂಡಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ಅಧೀಕ್ಷಕರು ಗಡಿಪಾರು ಆದೇಶ ಹೊರಡಿಸಿದ್ದಾರೆ.

ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಮೊಹಮ್ಮದ್ ದಾನೀಶ್ ಮದನಿ (23) ಹಾಗೂ ಕರಾಣಿ ಮುಸೀನ್ (44), ಶಿರ್ವ ಪೊಲೀಸ್ ಠಾಣಾ ವ್ಯಾಪ್ತಿಯ ಇಲಿಯಾಸ್ (36) ಎಂಬವರನ್ನು ಗಡಿಪಾರು ಮಾಡಲು ಆದೇಶ ಹೊರಡಿಸಲಾಗಿದೆ. 

ಮೊಹಮ್ಮದ್ ದಾನೀಶ್ ಮದನಿ ವಿರುದ್ಧ 8 ಪ್ರಕರಣಗಳು ದಾಖಲಾಗಿದ್ದು, ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ರೌಡಿ ಹಾಳೆ ತೆರೆಯಲಾಗಿದೆ. ಕರಾಣಿ ಮುಸೀನ್ ವಿರುದ್ಧ 7 ಪ್ರಕರಣಗಳು ದಾಖಲಾಗಿದ್ದು, ಅವರ ವಿರುದ್ಧವೂ ರೌಡಿ ಹಾಳೆ ತೆರೆಯಲಾಗಿದೆ. ಶಿರ್ವ ಠಾಣಾ ವ್ಯಾಪ್ತಿಯ ಇಲಿಯಾಸ್ ವಿರುದ್ಧ 15 ಪ್ರಕರಣಗಳು ದಾಖಲಾಗಿದ್ದು, ಶಿರ್ವ ಪೊಲೀಸ್ ಠಾಣೆಯಲ್ಲಿ ರೌಡಿ ಹಾಳೆ ನಿರ್ವಹಿಸಲಾಗುತ್ತಿದೆ.

ಈ ಮೂವರು ಕೊಲೆ, ಕೊಲೆಯತ್ನ, ಪೊಲೀಸ್ ಠಾಣೆಗೆ ಕಲ್ಲು ತೂರಾಟ, ಕನ್ನಕಳವು, ಜಾನುವಾರು ಕಳವು, ಜಾನುವಾರು ಹತ್ಯೆ ಹಾಗೂ ರೌಡಿಸಂ ಸೇರಿದಂತೆ ಒಟ್ಟು 30 ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.

ಗಡಿಪಾರು ಆದೇಶದಂತೆ ಮೊಹಮ್ಮದ್ ದಾನೀಶ್ ಮದನಿಯನ್ನು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ನಗರ ಪೊಲೀಸ್ ಠಾಣೆ ವ್ಯಾಪ್ತಿಗೆ, ಕರಾಣಿ ಮುಸೀನ್ ಅವರನ್ನು ಬೀದರ್ ಜಿಲ್ಲೆಯ ಗಾಂಧಿಗಂಜ ಪೊಲೀಸ್ ಠಾಣೆ ವ್ಯಾಪ್ತಿಗೆ ಹಾಗೂ ಇಲಿಯಾಸ್ ಅವರನ್ನು ಉತ್ತರ ಕನ್ನಡ ಜಿಲ್ಲೆಯ ಕಾರವಾರ ನಗರ ಪೊಲೀಸ್ ಠಾಣೆ ವ್ಯಾಪ್ತಿಗೆ ಕಳುಹಿಸಲಾಗಿದೆ.

ಕಳೆದ ಒಂದು ವರ್ಷದ ಅವಧಿಯಲ್ಲಿ ಉಡುಪಿ ಜಿಲ್ಲೆಯಲ್ಲಿ ಅಕ್ರಮ ಚಟುವಟಿಕೆಗಳು ಹಾಗೂ ರೌಡಿಸಂ ನಿಯಂತ್ರಣಕ್ಕಾಗಿ 3 ಮಂದಿಯನ್ನು ಪಿ.ಐ.ಟಿ. ಎನ್.ಡಿ.ಪಿ.ಎಸ್. ಕಾಯ್ದೆಯಡಿ, 4 ಮಂದಿಯನ್ನು ಗೂಂಡಾ ಕಾಯ್ದೆಯಡಿ ಬಂಧಿಸಿ ಕಾರಾಗೃಹಕ್ಕೆ ಕಳುಹಿಸಲಾಗಿದ್ದು, ಒಟ್ಟು 14 ಮಂದಿಯ ವಿರುದ್ಧ ಗಡಿಪಾರು ಕ್ರಮ ಜರುಗಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ಇಲಾಖೆ ಮಾಹಿತಿ ನೀಡಿದೆ.

Ads on article

Advertise in articles 1

advertising articles 2

Advertise under the article