-->
ರಾಮಮಂದಿರ ವಿವಾದ: ಸತ್ಯ ಹೊರಬರಲಿ, ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ – ವಿಶ್ವಪ್ರಸನ್ನತೀರ್ಥ ಶ್ರೀ

ರಾಮಮಂದಿರ ವಿವಾದ: ಸತ್ಯ ಹೊರಬರಲಿ, ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ – ವಿಶ್ವಪ್ರಸನ್ನತೀರ್ಥ ಶ್ರೀ


ರಾಮಮಂದಿರದಲ್ಲಿ ನಡೆದಿದೆ ಎನ್ನಲಾದ ಅವ್ಯಹಾರದ ಬಗ್ಗೆ ಎಸ್‌ಐಟಿ ತನಿಖೆ ನಡೆಯುತ್ತಿರುವುದು ಸ್ವಾಗತಾರ್ಹ. ತಪ್ಪು ಸಾಬೀತಾದರೆ ಸಂಬಂಧಪಟ್ಟವರಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಟ್ರಸ್ಟ್ ಸದಸ್ಯರೂ ಆಗಿರುವ ಪೇಜಾವರ ವಿಶ್ವ ಪ್ರಸನ್ನ ತೀರ್ಥ ಶ್ರೀಪಾದರು ಹೇಳಿದ್ದಾರೆ.

ಉಡುಪಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅವ್ಯವಹಾರ ಆರೋಪಗಳ ಕುರಿತು ಜುಲೈ 11ರಂದು ನಡೆಯಲಿರುವ ಟ್ರಸ್ಟ್ ಸಭೆಯಲ್ಲಿ ವಿಷಯ ಚರ್ಚೆಗೆ ಬರಲಿದ್ದು, ಸಭೆಯಲ್ಲಿ ಭಾಗವಹಿಸಿದ ಬಳಿಕವೇ ಪ್ರತಿಕ್ರಿಯೆ ನೀಡುವುದಾಗಿ ಹೇಳಿದರು.

ಸಿಂಧಿ ಸಮುದಾಯ 200 ಕೆ.ಜಿ. ಬೆಳ್ಳಿ ದೇಣಿಗೆ ನೀಡಿದ್ದರೂ ಸೂಕ್ತ ಗೌರವ ನೀಡಿಲ್ಲ ಎಂಬ ಆರೋಪದ ಕುರಿತು ಪ್ರತಿಕ್ರಿಯಿಸಿದ ಅವರು, ದೊಡ್ಡ ಮೊತ್ತದ ದೇಣಿಗೆ ನೀಡುವವರು ಸ್ಥಳದಲ್ಲೇ ರಶೀದಿ ಪಡೆಯಬೇಕು. ದೇಣಿಗೆ ನೀಡುವವರಿಗೂ, ಸ್ವೀಕರಿಸುವವರಿಗೂ ಸಮಾನ ಜವಾಬ್ದಾರಿ ಇದೆ. ರಶೀದಿ ನೀಡದೇ ಇದ್ದರೆ ಅದು ದೊಡ್ಡ ತಪ್ಪು. ಕೇವಲ ಬಾಯಿಮಾತಿನ ಹೇಳಿಕೆಗಳು ಉಳಿಯಬಾರದು ಎಂದರು.

ಆರೋಪ ಮಾಡಿದ್ದರೆ ಅದರಲ್ಲಿ ವಾಸ್ತವಾಂಶ ಇರಬಹುದು. ಆದರೆ ರಶೀದಿ ನೀಡಿಲ್ಲ ಎನ್ನುವುದನ್ನು ನಂಬಲು ಕಷ್ಟ. ಎಸ್‌ಐಟಿ ತನಿಖೆ ನಡೆಯುತ್ತಿರುವುದು ಸ್ವಾಗತಾರ್ಹ. ತಪ್ಪು ಸಾಬೀತಾದರೆ ಸಂಬಂಧಪಟ್ಟವರಿಗೆ ತಕ್ಕ ಶಿಕ್ಷೆಯಾಗಬೇಕು. ದೇಶ-ವಿದೇಶದ ಭಕ್ತರ ನಂಬಿಕೆಯ ಕೇಂದ್ರವಾಗಿರುವ ಸ್ಥಳದಲ್ಲಿ ಇಂತಹ ಘಟನೆ ನಡೆಯಬಾರದು ಎಂದು ಹೇಳಿದರು.

ತಾವು ಟ್ರಸ್ಟ್ ಸದಸ್ಯರಾಗಿ ಹಲವು ಸಲಹೆಗಳನ್ನು ನೀಡುತ್ತಿದ್ದೆ. ಸಭೆಗಳಲ್ಲಿಯೂ ವಿಷಯ ಪ್ರಸ್ತಾಪಿಸಿದ್ದೆ. ಸಂಬಂಧಪಟ್ಟವರು ವಿಶ್ವಾಸಾರ್ಹರಾಗಿರಬೇಕಿತ್ತು ಎಂದು ಸ್ವಾಮೀಜಿ ಅಭಿಪ್ರಾಯಪಟ್ಟರು.

ಚಂಪತ್ ರಾಯ್ ರಾಜೀನಾಮೆ ಬಗ್ಗೆ ಸ್ಪಷ್ಟನೆ ನೀಡಿದ ಸ್ವಾಮೀಜಿ, ಟ್ರಸ್ಟ್‌ನ ವಾಟ್ಸಪ್ ಗುಂಪಿನಲ್ಲಿ ಅಥವಾ ಚಂಪತ್ ರಾಯ್ ಅವರಿಂದ ರಾಜೀನಾಮೆ ಕುರಿತು ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ. ಏನು ಬೆಳವಣಿಗೆ ಆಗಿದೆ ಎಂಬುದು ತಿಳಿದಿಲ್ಲ ಎಂದು ಹೇಳಿದರು.

ಮಂದಿರಕ್ಕೆ ಅಪಾರ ದೇಣಿಗೆ ನೀಡುವುದಕ್ಕಿಂತ ಬಡವರಿಗೆ ಮನೆ ನಿರ್ಮಿಸಿ ಕೊಡುವುದೇ ನಿಜವಾದ ರಾಮಸೇವೆ ಎಂದು ಸ್ವಾಮೀಜಿ ಕರೆ ನೀಡಿದರು. ನೂರು ಕೆ.ಜಿ. ಬೆಳ್ಳಿ ಕೊಡುವ ಬದಲು ಸಾವಿರ ಮನೆಗಳನ್ನು ನಿರ್ಮಿಸಬಹುದು. ಅವಕಾಶ ವಂಚಿತರು, ದೀನ-ದಲಿತರಿಗೆ ನೆರವಾಗುವ ಮೂಲಕ ದೇವರ ಸೇವೆ ಮಾಡಬಹುದು ಎಂದರು.

ಆರ್‌ಎಸ್‌ಎಸ್ ನೋಂದಣಿ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, "ಸಂಘಟನೆಯನ್ನು ಅಧಿಕೃತವಾಗಿ ನೋಂದಾಯಿಸಿದರೆ ಅನಗತ್ಯ ಆರೋಪಗಳಿಗೆ ಅವಕಾಶ ಕಡಿಮೆಯಾಗುತ್ತದೆ" ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.



Ads on article

Advertise in articles 1

advertising articles 2

Advertise under the article