-->
ಮಳೆಗಾಲದ ಕಾಡುಸೊಪ್ಪು “ತಗತೆ”ಗೂ ಈಗ ಭಾರೀ ಬೇಡಿಕೆ

ಮಳೆಗಾಲದ ಕಾಡುಸೊಪ್ಪು “ತಗತೆ”ಗೂ ಈಗ ಭಾರೀ ಬೇಡಿಕೆ


ಸಾಮಾನ್ಯವಾಗಿ ಕಳೆಗಿಡ ಎಂದು ಪರಿಗಣಿಸಲ್ಪಡುವ ಚಕ್ರಮರ್ದ (ತಗತೆ) ಗಿಡ ಇದೀಗ ಆರೋಗ್ಯಕರ ಖಾದ್ಯವಾಗಿ ಜನರ ಗಮನ ಸೆಳೆಯುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ ಸಾಂಪ್ರದಾಯಿಕವಾಗಿ ಬಳಸಲಾಗುತ್ತಿದ್ದ ಈ ಸೊಪ್ಪು ಈಗ ನಗರ ಪ್ರದೇಶಗಳಲ್ಲಿಯೂ ಆಹಾರ ಪ್ರಿಯರ ಮೆಚ್ಚುಗೆ ಪಡೆಯುತ್ತಿದೆ. 


ಮಳೆಗಾಲ ಆರಂಭವಾದರೆ ಸಾಕು… ಹೊಲಗಳ ಅಂಚು, ರಸ್ತೆಬದಿಗಳು ಮತ್ತು ತೇವ ಪ್ರದೇಶಗಳಲ್ಲಿ ಸ್ವಾಭಾವಿಕವಾಗಿ ಬೆಳೆಯುವ ಸಸ್ಯಗಳಲ್ಲಿ ತಗತೆ ಗಿಡ (ಚಕ್ರಮರ್ದ ಗಿಡ)ವೂ ಒಂದು. ಮಳೆ ಹನಿಗಳು ಭೂಮಿಯನ್ನು ತೇವಗೊಳಿಸುತ್ತಿದ್ದಂತೆ ಕರಾವಳಿಯ ಹೊಲ, ತೋಟ ಹಾಗೂ ಗುಡ್ಡಗಾಡು ಪ್ರದೇಶಗಳಲ್ಲಿ ಹಚ್ಚಹಸಿರಾಗಿ ಬೆಳೆಯುವ ಈ ಸೊಪ್ಪು ಗ್ರಾಮೀಣ ಬದುಕಿನ ಅವಿಭಾಜ್ಯ ಅಂಗವಾಗಿದೆ. ಮಳೆಗಾಲದಲ್ಲಿ ಮಾತ್ರ ಹೆಚ್ಚಾಗಿ ದೊರೆಯುವ ಈ ಸೊಪ್ಪನ್ನು ಜನರು ಪ್ರಕೃತಿಯ ಕೊಡುಗೆಯೆಂದು ಪರಿಗಣಿಸುತ್ತಾರೆ.


ಕೇವಲ ರುಚಿಗಷ್ಟೇ ಅಲ್ಲ, ಆರೋಗ್ಯದ ದೃಷ್ಟಿಯಿಂದಲೂ ಈ ಸೊಪ್ಪು ಮಹತ್ವ ಪಡೆದಿದೆ. ಪೌಷ್ಟಿಕಾಂಶಗಳಿಂದ ಸಮೃದ್ಧವಾಗಿರುವ ಈ ಸೊಪ್ಪನ್ನು ಹಿರಿಯರು ಮತ್ತು ಮಕ್ಕಳು ಸಮಾನವಾಗಿ ಇಷ್ಟಪಡುತ್ತಾರೆ. ಮಳೆಗಾಲದ ಆರೋಗ್ಯ ಕಾಪಾಡುವ ಆಹಾರಗಳಲ್ಲಿ ಇದಕ್ಕೂ ಪ್ರಮುಖ ಸ್ಥಾನವಿದೆ. ಈ ಸಸ್ಯ ಇಂದು ತನ್ನ ಔಷಧೀಯ ಗುಣಗಳು ಮತ್ತು ಪೌಷ್ಟಿಕಾಂಶಯುಕ್ತ ಖಾದ್ಯಗಳ ಕಾರಣದಿಂದ ಮತ್ತೆ ಜನಪ್ರಿಯವಾಗುತ್ತಿದೆ. 

ಈ ಸಸ್ಯದಿಂದ ತಯಾರಿಸುವ ಆಹಾರಗಳು ಚರ್ಮದ ತೊಂದರೆಗಳನ್ನು ಕಡಿಮೆ ಮಾಡಲು ಸಹಾಯಕವಾಗಿವೆ. ವಿಶೇಷವಾಗಿ ಚರ್ಮದ ಶಿಲೀಂಧ್ರ ಸೋಂಕು ಮತ್ತು ತುರಿಕೆ ಸಮಸ್ಯೆಗಳಿಗೆ ಇದು ನೈಸರ್ಗಿಕ ಪರಿಹಾರವಾಗಿ ಬಳಸಲಾಗುತ್ತದೆ. 

ಕರಾವಳಿಯಲ್ಲಿ ನಾನಾ ಹೆಸರುಗಳಿಂದ ಕರೆಯಲ್ಪಡುವ ಈ ಸೊಪ್ಪು ಮಳೆಗಾಲದಲ್ಲಿ ಪ್ರತೀಯೊಬ್ಬರ ಮನೆಯಲ್ಲೂ ಹಲವು ವಿಧದ ಖಾದ್ಯವಾಗುತ್ತದೆ. ತುಳುವಿನಲ್ಲಿ "ತೊಜಂಕ್", ಕೊಂಕಣಿಯಲ್ಲಿ "ತೈಕಿಳೋ" ಎಂಬ ಹೆಸರಿನಿಂದ ಕರೆಯಲ್ಪಡುವ ಸೊಪ್ಪು ಕರಾವಳಿಯಲ್ಲಿ ವಿಶೇಷ ಸ್ಥಾನ ಪಡೆದಿದೆ 

ಕರಾವಳಿಯ ಅಡುಗೆ ಸಂಸ್ಕೃತಿಯಲ್ಲಿ ಈ ಸೊಪ್ಪಿನಿಂದ ತಯಾರಾಗುವ ಖಾದ್ಯಗಳ ವೈವಿಧ್ಯವೇ ವಿಶೇಷ. ಸಾಂಪ್ರದಾಯಿಕ ಪತ್ರೋಡೆಯಿಂದ ಹಿಡಿದು ರುಚಿಕರ ಚಟ್ಟಂಬಡೆವರೆಗೆ, ಸಾಂಬಾರ್ ಮತ್ತು ಪಲ್ಯದಿಂದ ಹಿಡಿದು ವಿಶೇಷ ತಿಂಡಿಗಳವರೆಗೆ ಅನೇಕ ಬಗೆಯ ತಿನಿಸುಗಳನ್ನು ತಯಾರಿಸಲಾಗುತ್ತದೆ

ಆರೋಗ್ಯಕರ ಮತ್ತು ನೈಸರ್ಗಿಕ ಆಹಾರಗಳತ್ತ ಜನರು ಹೆಚ್ಚು ಒಲವು ತೋರುತ್ತಿರುವ ಹಿನ್ನೆಲೆಯಲ್ಲಿ, ಚಕ್ರಮರ್ದ ಗಿಡಕ್ಕೂ ಹೊಸ ಮೌಲ್ಯ ದೊರಕಿದೆ. ಕೆಲವು ರೈತರು ಇದನ್ನು ಸಂಗ್ರಹಿಸಿ ಸ್ಥಳೀಯ ಮಾರುಕಟ್ಟೆಗಳಲ್ಲಿ ಮಾರಾಟ ಮಾಡುವ ಮೂಲಕ ಹೆಚ್ಚುವರಿ ಆದಾಯವನ್ನೂ ಗಳಿಸುತ್ತಿದ್ದಾರೆ.

ಆಧುನಿಕ ಆಹಾರ ಪದ್ಧತಿಗಳ ನಡುವೆಯೂ ಕರಾವಳಿಯ ಜನರು ತಮ್ಮ ಸಾಂಪ್ರದಾಯಿಕ ಆಹಾರ ಸಂಸ್ಕೃತಿಯನ್ನು ಉಳಿಸಿಕೊಂಡಿದ್ದಾರೆ. ಪ್ರಕೃತಿಯಲ್ಲಿ ದೊರೆಯುವ ಈ ಸೊಪ್ಪಿನ ಸವಿಯನ್ನು ಮುಂದಿನ ಪೀಳಿಗೆಗೂ ಪರಿಚಯಿಸುವ ಪ್ರಯತ್ನಗಳು ಆಟಿಡೊಂಜಿ ಕೂಟ ಕಾರ್ಯಕ್ರಮಗಳ ಮೂಲಕ ನಡೆಯುತ್ತಿವೆ. 

ಮಳೆಗಾಲದೊಂದಿಗೆ ಬೆಸೆದುಕೊಂಡಿರುವ ಈ ತೊಜಂಕ್ ಅಥವಾ ತೈಕಿಳೋ ಸೊಪ್ಪು ಕೇವಲ ಆಹಾರ ಪದಾರ್ಥವಲ್ಲ, ಕರಾವಳಿಯ ಸಂಸ್ಕೃತಿ, ಸಂಪ್ರದಾಯ ಮತ್ತು ಆರೋಗ್ಯಕರ ಜೀವನಶೈಲಿಯ ಪ್ರತೀಕವೂ ಹೌದು. 


Ads on article

Advertise in articles 1

advertising articles 2

Advertise under the article