-->
ಅತಿಥಿ ಶಿಕ್ಷಕರ ವೇತನ ₹25 ಸಾವಿರಕ್ಕೆ ಹೆಚ್ಚಿಸಿ, ಸೇವಾ ಭದ್ರತೆ ಕಲ್ಪಿಸಿ: ಸಿಎಂಗೆ ಶಾಸಕ ಯಶ್ಪಾಲ್ ಮನವಿ

ಅತಿಥಿ ಶಿಕ್ಷಕರ ವೇತನ ₹25 ಸಾವಿರಕ್ಕೆ ಹೆಚ್ಚಿಸಿ, ಸೇವಾ ಭದ್ರತೆ ಕಲ್ಪಿಸಿ: ಸಿಎಂಗೆ ಶಾಸಕ ಯಶ್ಪಾಲ್ ಮನವಿ


ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅತಿಥಿ ಶಿಕ್ಷಕರ ಕನಿಷ್ಠ ಮಾಸಿಕ ವೇತನವನ್ನು ₹25,000 ರೂಪಾಯಿಗೆ ಹೆಚ್ಚಿಸಿ, ಸೇವಾ ಭದ್ರತೆ ಕಲ್ಪಿಸುವುದರ ಜೊತೆಗೆ ಪ್ರತಿ ತಿಂಗಳು ನಿಗದಿತ ಸಮಯಕ್ಕೆ ವೇತನ ಪಾವತಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಅವರು ಮುಖ್ಯಮಂತ್ರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.

ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟ ಕಾಪಾಡುವಲ್ಲಿ ರಾಜ್ಯದಾದ್ಯಂತ ಸಾವಿರಾರು ಅತಿಥಿ ಶಿಕ್ಷಕರು ಮಹತ್ವದ ಪಾತ್ರ ವಹಿಸುತ್ತಿದ್ದು, ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಜವಾಬ್ದಾರಿಯನ್ನು ನಿಷ್ಠೆಯಿಂದ ನಿರ್ವಹಿಸುತ್ತಿದ್ದಾರೆ. ಆದರೆ ಪ್ರಸ್ತುತ ದಿನಕ್ಕೆ ₹400ರಂತೆ ತಿಂಗಳಿಗೆ ಕೇವಲ ₹12,000 ಸಂಭಾವನೆ ನೀಡಲಾಗುತ್ತಿದ್ದು, ಇಂದಿನ ಜೀವನ ನಿರ್ವಹಣೆಗೆ ಇದು ಸಾಕಾಗುತ್ತಿಲ್ಲ ಎಂದು ಅವರು ತಿಳಿಸಿದ್ದಾರೆ.

ಹಲವು ತಿಂಗಳುಗಳ ಕಾಲ ವೇತನ ಪಾವತಿಯಾಗದೆ ವಿಳಂಬವಾಗುತ್ತಿರುವುದು ಅತಿಥಿ ಶಿಕ್ಷಕರ ಕುಟುಂಬಗಳ ಆರ್ಥಿಕ ಸ್ಥಿತಿಯ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಆದ್ದರಿಂದ ಪ್ರತಿ ತಿಂಗಳು ನಿಗದಿತ ಸಮಯಕ್ಕೆ ವೇತನ ಪಾವತಿಸುವ ವ್ಯವಸ್ಥೆಯನ್ನು ಸರ್ಕಾರ ಜಾರಿಗೊಳಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಪ್ರಸ್ತುತ ಅತಿಥಿ ಶಿಕ್ಷಕರಿಗೆ ವರ್ಷದಲ್ಲಿ 10 ತಿಂಗಳು ಮಾತ್ರ ವೇತನ ನೀಡಲಾಗುತ್ತಿದ್ದು, ಖಾಯಂ ಶಿಕ್ಷಕರ ಮಾದರಿಯಲ್ಲಿ ಏಪ್ರಿಲ್ ಹಾಗೂ ಮೇ ತಿಂಗಳ ವೇತನವನ್ನೂ ನೀಡುವಂತೆ ಕ್ರಮ ಕೈಗೊಳ್ಳಬೇಕು ಎಂದು ಯಶ್ಪಾಲ್ ಸುವರ್ಣ ಆಗ್ರಹಿಸಿದ್ದಾರೆ.

ಇದಲ್ಲದೆ, ಅತಿಥಿ ಶಿಕ್ಷಕರಿಗೆ ಸೇವಾ ಭದ್ರತೆ, ಉದ್ಯೋಗದ ಖಾತರಿ ಹಾಗೂ ಪಿಎಫ್, ಇಎಸ್‌ಐ ಸೇರಿದಂತೆ ಅಗತ್ಯ ಸಾಮಾಜಿಕ ಭದ್ರತಾ ಸೌಲಭ್ಯಗಳಿಲ್ಲದಿರುವುದರಿಂದ ಅವರು ಅನಿಶ್ಚಿತತೆಯ ನಡುವೆ ಸೇವೆ ಸಲ್ಲಿಸುವಂತಾಗಿದೆ. ಸಮಾಜ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸುವ ಶಿಕ್ಷಕರಿಗೆ ಗೌರವಯುತ ವೇತನ ಹಾಗೂ ಅಗತ್ಯ ಸೌಲಭ್ಯಗಳನ್ನು ಒದಗಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ ಎಂದು ಅವರು ಹೇಳಿದ್ದಾರೆ.

ರಾಜ್ಯದ ಅತಿಥಿ ಶಿಕ್ಷಕರ ಕನಿಷ್ಠ ಮಾಸಿಕ ವೇತನವನ್ನು ₹25,000ಕ್ಕೆ ಹೆಚ್ಚಿಸುವುದು, ವೇತನವನ್ನು ಸಮಯಕ್ಕೆ ಸರಿಯಾಗಿ ಪಾವತಿಸುವ ವ್ಯವಸ್ಥೆ ಜಾರಿಗೊಳಿಸುವುದು, ಸೇವಾ ಭದ್ರತೆ ಕಲ್ಪಿಸುವುದು ಸೇರಿದಂತೆ ಅವರ ವಿವಿಧ ಬೇಡಿಕೆಗಳನ್ನು ಸರ್ಕಾರ ಕೂಡಲೇ ಈಡೇರಿಸಬೇಕು. ಅಲ್ಲದೆ, ಖಾಯಂ ಶಿಕ್ಷಕರ ನೇಮಕಾತಿ ವೇಳೆ ದೀರ್ಘಕಾಲ ಸೇವೆ ಸಲ್ಲಿಸಿರುವ ಅತಿಥಿ ಶಿಕ್ಷಕರ ಸೇವಾನುಭವವನ್ನು ಪರಿಗಣಿಸಿ ಸೂಕ್ತ ಆದ್ಯತೆ ನೀಡುವಂತೆ ರಾಜ್ಯ ಸರ್ಕಾರಕ್ಕೆ ಶಾಸಕ ಯಶ್ಪಾಲ್ ಸುವರ್ಣ ಮನವಿ ಮಾಡಿದ್ದಾರೆ.

Ads on article

Advertise in articles 1

advertising articles 2

Advertise under the article