ಜು.25: ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಐವಿಎಫ್ ಪ್ರಯೋಗಾಲಯಕ್ಕೆ ಮುಕ್ತ ಪ್ರವೇಶ
ವಿಶ್ವ ಭ್ರೂಣಶಾಸ್ತ್ರಜ್ಞರ ದಿನದ ಅಂಗವಾಗಿ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆ, ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ ಸಹಯೋಗದಲ್ಲಿ ಜುಲೈ 25ರಂದು ವಿಶೇಷ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಿದೆ.
"ಐವಿಎಫ್ ಪ್ರಯೋಗಾಲಯದಲ್ಲಿ ಜೀವನದ ಅದ್ಭುತವನ್ನು ಅನುಭವಿಸಿ" ಎಂಬ ಧ್ಯೇಯದಡಿ ನಡೆಯಲಿರುವ ಈ ಕಾರ್ಯಕ್ರಮವು ಬೆಳಗ್ಗೆ 11ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಮಣಿಪಾಲ್ ಸೆಂಟರ್ ಫಾರ್ ಎಂಬ್ರಿಯಾಲಜಿ ಅಂಡ್ ರಿಪ್ರೊಡಕ್ಟಿವ್ ಸೈನ್ಸ್ (MARC) ನಲ್ಲಿ ನಡೆಯಲಿದೆ. ಬೆಳಗ್ಗೆ 10 ಗಂಟೆಗೆ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ ಡೀನ್ ಡಾ. ಅನಿಲ್ ಭಟ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ಮಾಹೆ ಮಣಿಪಾಲದ ಬೋಧನಾ ಆಸ್ಪತ್ರೆಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಸುಧಾಕರ್ ಕಂಟಿಪುಡಿ ಉಪಸ್ಥಿತರಿರುವರು.
ಈ ಕಾರ್ಯಕ್ರಮವು ಸಾರ್ವಜನಿಕರಿಗೆ ಮುಕ್ತವಾಗಿದ್ದು, ಉಚಿತ ನೋಂದಣಿಯ ವ್ಯವಸ್ಥೆ ಮಾಡಲಾಗಿದೆ. ಫಲವತ್ತತೆ, ಭ್ರೂಣಶಾಸ್ತ್ರ ಹಾಗೂ ಸಹಾಯಕ ಸಂತಾನೋತ್ಪತ್ತಿ ತಂತ್ರಜ್ಞಾನದ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮದ ಅಂಗವಾಗಿ "ಫರ್ಟಿಲಿಟಿ ಕನೆಕ್ಟ್" ಮೂಲಕ ಮಗುವಿನ ನಿರೀಕ್ಷೆಯಲ್ಲಿರುವ ಅಥವಾ ಕುಟುಂಬವನ್ನು ಆರಂಭಿಸಲು ಯೋಜಿಸುತ್ತಿರುವ ದಂಪತಿಗಳಿಗೆ ಫಲವತ್ತತೆ ತಜ್ಞರಿಂದ ಉಚಿತ ವೈಯಕ್ತಿಕ ಸಮಾಲೋಚನೆ ನೀಡಲಾಗುತ್ತದೆ. ಜೊತೆಗೆ ಇತ್ತೀಚಿನ ಫಲವತ್ತತೆ ಚಿಕಿತ್ಸಾ ವಿಧಾನಗಳ ಕುರಿತು ಮಾಹಿತಿ ಹಾಗೂ ತಜ್ಞರ ಮಾರ್ಗದರ್ಶನವೂ ದೊರೆಯಲಿದೆ.
ಇದಲ್ಲದೆ "ಎಂಬ್ರಿಯಾಲಜಿ ಓಪನ್ ಹೌಸ್" ಕಾರ್ಯಕ್ರಮದ ಮೂಲಕ ಕ್ಲಿನಿಕಲ್ ಎಂಬ್ರಿಯಾಲಜಿಯಲ್ಲಿ ವೃತ್ತಿ ನಿರ್ಮಿಸಿಕೊಳ್ಳಲು ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳು ಮತ್ತು ಯುವಕರು ಅತ್ಯಾಧುನಿಕ ಐವಿಎಫ್ ಪ್ರಯೋಗಾಲಯಕ್ಕೆ ಭೇಟಿ ನೀಡಿ, ಅನುಭವಿ ಭ್ರೂಣಶಾಸ್ತ್ರಜ್ಞರೊಂದಿಗೆ ಸಂವಾದ ನಡೆಸುವ ಅವಕಾಶ ಪಡೆಯಲಿದ್ದಾರೆ. ಜೀವದ ಆರಂಭಿಕ ಬೆಳವಣಿಗೆಯ ಹಂತಗಳು ಹಾಗೂ ಆಧುನಿಕ ಸಂತಾನೋತ್ಪತ್ತಿ ತಂತ್ರಜ್ಞಾನದ ಕಾರ್ಯವೈಖರಿಯನ್ನು ನೇರವಾಗಿ ವೀಕ್ಷಿಸಬಹುದಾಗಿದೆ.
ಈ ಕುರಿತು ಕ್ಲಿನಿಕಲ್ ಎಂಬ್ರಿಯಾಲಜಿ ಶ್ರೇಷ್ಠತಾ ಕೇಂದ್ರದ ಮುಖ್ಯಸ್ಥರು ಹಾಗೂ ಫಲವತ್ತತೆ ಸಂರಕ್ಷಣಾ ಕೇಂದ್ರದ ಸಮನ್ವಯಕಾರರಾದ ಪ್ರೊ. ಡಾ. ಸತೀಶ್ ಕುಮಾರ್ ಅಡಿಗ ಮಾತನಾಡಿ, "ಪ್ರತಿಯೊಂದು ಯಶಸ್ವಿ ಐವಿಎಫ್ ಚಿಕಿತ್ಸೆಯ ಹಿಂದೆ ಭ್ರೂಣಶಾಸ್ತ್ರಜ್ಞರ ಸಮರ್ಪಿತ ಸೇವೆ ಅಡಗಿದೆ. ಜೀವನದ ಮೊದಲ ಕ್ಷಣಗಳನ್ನು ಪ್ರಯೋಗಾಲಯದಲ್ಲಿ ಅತ್ಯಂತ ನಿಖರವಾಗಿ ಪೋಷಿಸುವ ಅವರ ಕಾರ್ಯವನ್ನು ಸಾರ್ವಜನಿಕರಿಗೆ ಪರಿಚಯಿಸುವುದು ಹಾಗೂ ಮುಂದಿನ ತಲೆಮಾರಿಗೆ ಈ ಕ್ಷೇತ್ರದ ಬಗ್ಗೆ ಪ್ರೇರಣೆ ನೀಡುವುದು ವಿಶ್ವ ಭ್ರೂಣಶಾಸ್ತ್ರಜ್ಞರ ದಿನದ ಆಚರಣೆಯ ಮುಖ್ಯ ಉದ್ದೇಶವಾಗಿದೆ" ಎಂದು ತಿಳಿಸಿದ್ದಾರೆ.