ವಿದ್ಯಾರ್ಥಿ ನಾಯಕರೊಂದಿಗೆ ಮಾತುಕತೆಗೆ ಸರ್ಕಾರ ಸಿದ್ಧ: ಕೇಂದ್ರ ಸಚಿವ ಡಾ. ಜಿತೇಂದ್ರ ಸಿಂಗ್
ವಿದ್ಯಾರ್ಥಿ ನಾಯಕರೊಂದಿಗೆ ಎಲ್ಲಾ ವಿಷಯಗಳ ಕುರಿತು ಚರ್ಚಿಸಲು ಕೇಂದ್ರ ಸರ್ಕಾರ ಸಂಪೂರ್ಣ ಸಿದ್ಧವಾಗಿದೆ ಎಂದು ಕೇಂದ್ರ ಸಚಿವ ಡಾ. ಜಿತೇಂದ್ರ ಸಿಂಗ್ ಸ್ಪಷ್ಟಪಡಿಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, ನಿನ್ನೆ ಮಧ್ಯಾಹ್ನದಿಂದ ಸಿಜೆಪಿ ಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸಲು ಸರ್ಕಾರ ಈಗಾಗಲೇ ನಾಲ್ಕು ಅಧಿಕೃತ ಪ್ರಸ್ತಾಪಗಳನ್ನು ಕಳುಹಿಸಿದೆ ಎಂದು ತಿಳಿಸಿದರು. "ಇದು ನಮ್ಮ ಯುವ ಸ್ನೇಹಿತರಿಗೆ ನೀಡುತ್ತಿರುವ ಮುಕ್ತ ಆಹ್ವಾನವಾಗಿದೆ. ಅವರ ಅನುಕೂಲಕ್ಕೆ ತಕ್ಕಂತೆ, ಯಾವುದೇ ಸಮಯದಲ್ಲಿ ಎಲ್ಲಾ ವಿಷಯಗಳ ಕುರಿತು ಚರ್ಚಿಸಲು ಸರ್ಕಾರ ಸಿದ್ಧವಾಗಿದೆ" ಎಂದು ಹೇಳಿದರು.
ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಅವರ ಕಚೇರಿ ಅಥವಾ ನಿವಾಸದಲ್ಲಿ ಈ ಮಾತುಕತೆಗಳು ನಡೆಯಬಹುದಾಗಿದೆ ಎಂದು ತಿಳಿಸಿದ ಜಿತೇಂದ್ರ ಸಿಂಗ್, "ನಾವು ಯಾವುದೇ ಪ್ರತಿಷ್ಠೆಯ ಪ್ರಶ್ನೆಗೆ ಬಿದ್ದಿಲ್ಲ. ಜೆ.ಪಿ. ನಡ್ಡಾ ಮತ್ತು ನಾನು ಸ್ವತಃ ಚರ್ಚೆಯಲ್ಲಿ ಭಾಗವಹಿಸುತ್ತೇವೆ. ನಿರಂತರ ಸಂವಾದದ ಮೂಲಕವೇ ಹಂತ ಹಂತವಾಗಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು" ಎಂದು ಹೇಳಿದರು.
ವಿದ್ಯಾರ್ಥಿಗಳ ಹಿತರಕ್ಷಣೆಯನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ನಿರಂತರವಾಗಿ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಸಂವಾದದ ಮೂಲಕವೇ ಸಕಾರಾತ್ಮಕ ಪರಿಹಾರ ಸಾಧ್ಯ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.